ಶಿಬಿರಗಳಿಗಿಂತ ವೈಯಕ್ತಿಕ ರಕ್ತದಾನ ಉತ್ತಮ: ಡಾ.ಮಧುಸೂದನ್ ನಾಯಕ್

Update: 2017-07-12 14:27 GMT

ಉಡುಪಿ, ಜು.12: ರಕ್ತ ಸಂಗ್ರಹವು ಹೆಚ್ಚು ಆಗಬಾರದು, ಕಡಿಮೆಯೂ ಆಗಬಾರದು. ಸಂಗ್ರಹಿಸಿದ ರಕ್ತವನ್ನು 35 ದಿನಗಳಿಗಿಂತ ಹೆಚ್ಚು ಇಟ್ಟುಕೊಳ್ಳಲಾಗುವುದಿಲ್ಲ. ಹೀಗಾಗಿ ಶಿಬಿರಗಳಲ್ಲಿ ರಕ್ತದಾನ ಮಾಡುವುದಕ್ಕಿಂತ ರಕ್ತದಾನಿಗಳ ಪಟ್ಟಿ ರಚಿಸಿ ಅಗತ್ಯ ಇದ್ದಾಗ ವೈಯಕ್ತಿಕವಾಗಿ ರಕ್ತ ನೀಡುವುದು ಉತ್ತಮ ಎಂದು ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ನಾಗರಿಕ ಸಮಿತಿ ಮತ್ತು ಜೋಸ್ ಆಲುಕ್ಕಾಸ್ ಜ್ಯುವೆಲ್ಲರ್ಸ್‌ ಉಡುಪಿ ಇವರ ಜಂಟಿ ಆಶ್ರಯದಲ್ಲಿ ರಕ್ತ ಗುಂಪು ವಿಂಗಡಣೆ ಹಾಗೂ ಅವಶ್ಯಕತೆ ಇದ್ದಾಗ ರಕ್ತ ಒದಗಿಸಲು ರಕ್ತದಾನಿಗಳಿಂದ ಹೆಸರು ನೋಂದಾಯಿಸುವ "ನಿತ್ಯ ರಕ್ತ ಸ್ಪಂದನೆ" ಕಾರ್ಯಕ್ರಮವನ್ನು ನಗರದ ಚಿತ್ತರಂಜನ್ ಸರ್ಕಲ್ ಬಳಿಯ ಜೋಸ್ ಆಲುಕ್ಕಾಸ್ ಮಳಿಗೆಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಂಗ್ರಹಿಸಿದ ರಕ್ತವನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಬೇಕಾಗಿರುವುದರಿಂದ ರಾಜ್ಯ ಸರಕಾರದ ಸುತ್ತೋಲೆ ಪ್ರಕಾರ ಈಗ ಜಿಲ್ಲಾಸ್ಪತ್ರೆಯ ರಕ್ತನಿಧಿಯಲ್ಲಿ ಒಂದು ಬಾಟಲಿ ರಕ್ತಕ್ಕೆ 700 ರೂ. ಬದಲು 1,500 ರೂ. ಪಡೆದುಕೊಳ್ಳಲಾಗುತ್ತಿದೆ. ಇದು ಸೇವೆಯ ಶುಲ್ಕವೇ ಹೊರತು ರಕ್ತದ ಮೌಲ್ಯ ಅಲ್ಲ ಎಂದು ಅವರು ತಿಳಿಸಿದರು.

ಈಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಬಿಪಿಎಲ್ ಕಾರ್ಡ್‌ದಾರರಿಗೆ ಮಾತ್ರವಲ್ಲದೆ ಖಾಸಗಿ ಆಸ್ಪತ್ರೆಯಲ್ಲಿರುವ ಬಿಪಿಎಲ್ ಕಾರ್ಡ್‌ದಾರರಿಗೂ ಉಚಿತ ರಕ್ತವನ್ನು ನೀಡಲಾಗುತ್ತಿದೆ ಎಂದ ಅವರು, ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಕಂಡುಹಿಡಿಯಲು ವಿಜ್ಞಾನ ಲೋಕಕ್ಕೆ ಈವರೆಗೆ ಸಾಧ್ಯವಾಗಿಲ್ಲ. ರಕ್ತದಾನ ಮಾಡುವವರು ಪ್ರತಿಫಲ ಅಪೇಕ್ಷೆ ಇಟ್ಟುಕೊಳ್ಳಬಾರದು ಎಂದರು.

ಉಡುಪಿ ಅಮೃತ್ ಲ್ಯಾಬೋರೇಟರಿ ಎ.ರಾಘವೇಂದ್ರ ಕಿಣಿ, ಉಡುಪಿ ಮಹಾಲಕ್ಷ್ಮೀ ಕೋಆಪರೇಟಿವ್ ಸೊಸೈಟಿಯ ಮ್ಯಾನೇಜರ್ ರತ್ನಾ ಎಸ್. ಬಂಗೇರ, ಜೋಸ್ ಆಲುಕ್ಕಾಸ್‌ನ ಸಹಾಯಕ ಪ್ರಬಂಧಕ ಫ್ರೈಡ್ ಆ್ಯಂಟನಿ ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ತ್ರಿಶಾ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News