ಕಲ್ಲಡ್ಕ ಅಹಿತಕರ ಘಟನೆಗಳಿಗೆ ಕಾರಣರಾದ ಆರೋಪಿಗಳ ಬಗ್ಗೆ ಸುಳಿವು ಲಭ್ಯ -ಅಲೋಕ್ ಮೋಹನ್
ಮಂಗಳೂರು, ಜು.12: ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ. ಜಿಲ್ಲೆಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಕಲ್ಲಡ್ಕ ಘಟನೆಗೆ ಸಂಬಂಧಿಸಿದಂತೆ ಒಟ್ಟು 6 ಪ್ರಕರಣ ದಾಖಲಾಗಿದೆ. 17 ಜನರನ್ನು ಬಂಧಿಸಲಾಗಿದೆ. ಎಲ್ಲಾ ಅಹಿತಕರ ಘಟನೆಗಳ ಹಿಂದಿರುವ ಆರೋಪಿಗಳ ಬಗ್ಗೆ ಪ್ರಮುಖ ಸುಳಿವು ದೊರೆತಿದೆ. ಜನರು ಶಾಂತಿ ಕಾಪಾಡಲು ಪೊಲೀಸರೊಂದಿಗೆ ಸಹಕಾರ ನೀಡಬೇಕು ಎಂದು ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಹಿತಕರ ವಾತಾವರಣ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಇತರ ಕಡೆಯಿಂದ ಹೆಚ್ಚುವರಿ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಹೊರ ರಾಜ್ಯಗಳಿಂದಲೂ ತಜ್ಞರನ್ನು ಕರೆಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಜನಜೀವನ ಮತ್ತೆ ಸಹಜ ಸ್ಥಿತಿಗೆ ಮರಳಿದೆ ಈ ಸಂದರ್ಭದಲ್ಲಿ ಸಾರ್ವಜನಿಕರು ಶಾಂತಿ ಸ್ಥಾಪನೆಗೆ ಸಹಕಾರ ನಿರಂತರವಾಗಿ ನೀಡಬೇಕಾಗಿದೆ ಎಂದವರು ತಿಳಿಸಿದ್ದಾರೆ.
ಬಂಟ್ವಾಳಲ್ಲಿ ಕಲ್ಲು ತೂರಾಟದ ಘಟನೆಗೆ ಸಂಬಂಧಿಸಿದಂತೆ ಪೊಲೀಸರ ಬಳಿ ವೀಡಿಯೊ ದಾಖಲೆಗಳಿವೆ. ಇದರಲ್ಲಿ ಭಾಗಿಯಾದವರ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತ ತನಿಖೆಗೆ ಕ್ರಮ ಕೈ ಗೊಳ್ಳಲಾಗಿದೆ. ನಿರಪರಾಧಿಗಳನ್ನು ಯಾರನ್ನು ಬಂಧಿಸಿಲ್ಲ. ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳನ್ನು ಹಿಡಿಯುವುದು ನಮ್ಮ ಮುಂದಿರುವ ಸವಾಲು. ಈ ನಿಟ್ಟಿನಲ್ಲಿ ಪೊಲೀಸರು ಹಗಲಿರುಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶರತ್ ಮಡಿವಾಳ ಕೊಲೆ ಪ್ರಕರಣದ ಆರೋಪಿಗಳ ಬಗ್ಗೆ ಮಹತ್ವದ ಸುಳಿವು ದೊರೆತಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸುವುದಾಗಿ ಎಡಿಜಿಪಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ನಿಷೇಧಾಜ್ಞೆ ಹೇರುವ ಮೂಲಕ ಜನಸಾಮಾನ್ಯರ ದೈನಂದಿನ ವ್ಯವಹಾರಕ್ಕೆ ಅಡ್ಡಿ ಪಡಿಸುವ ಉದ್ದೇಶವಿಲ್ಲ. ಆದರೆ ಈ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ಅಪರಾಧ ಕೃತ್ಯದಲ್ಲಿ ತೊಡಗಿದಾಗ ಕಾನೂನು ಪ್ರಕಾರ ಅವರ ವಿರುದ್ಧ ಕ್ರಮ ಕೈ ಗೊಳ್ಳಲಾಗುವುದು. ಶಾಂತಿ ಭಂಗ ಉಂಟು ಮಾಡುವ ಯಾವುದೇ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ ಎಂದು ಎಡಿಜಿಪಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪಶ್ಚಿಮ ವಲಯ ಐಜಿಪಿ ಅಲೋಕ್ ಮೋಹನ್, ಮಂಗಳೂರು ಪೊಲೀಸ್ ಕಮೀಶನರ್ ಟಿ.ಆರ್.ಸುರೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ, ಡಿಸಿಪಿ ಶಾಂತರಾಜು, ಹನುಂತರಾಯ ಮೊದಲಾದವರು ಉಪಸ್ಥಿತರಿದ್ದರು.