ವಿದ್ಯುತ್ ಒದಗಿಸುವ ವಿಚಾರದಲ್ಲಿ ಮಕ್ಕಳಾಟಿಕೆ ಮಾಡಬೇಡಿ: ಅಧಿಕಾರಿಗಳಿಗೆ ಶಾಸಕಿ ಶಕುಂತಳಾ ಶೆಟ್ಟಿ ಎಚ್ಚರಿಕೆ
ಪುತ್ತೂರು, ಜು.12 :ವಿದ್ಯುತ್ ಸಮರ್ಪಕವಾಗಿ ಒದಗಿಸುವ ವಿಚಾರದಲ್ಲಿ ಯಾವುದೇ ಮೆಸ್ಕಾಂ ಅಧಿಕಾರಿ, ಸಿಬ್ಬಂದಿಗಳು ಮಕ್ಕಳಾಟಿಕೆ ಮಾಡಬೇಡಿ . ಜನರಿಗೆ ಸಮಸ್ಯೆ ಆಗುವ ಮೊದಲೇ ಕ್ರಮಕೈಗೊಳ್ಳಿ. ಮೆಸ್ಕಾಂ ಇಲಾಖೆ ಬಾರೀ ನಿಧಾನವಿದೆ. ಇಲಾಖೆಗೆ ಕೊಟ್ಟ ಕೆಲವೊಂದು ಅರ್ಜಿಗಳೇ ಕಾಣೆಯಾಗುತ್ತಿದೆ. ಇವೆಲ್ಲವನ್ನು ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ. ಈ ಸ್ಥಿತಿ ಮುಂದುವರಿಯದಂತೆ ಎಚ್ಚರ ವಹಿಸಿ ಎಂದು ಶಾಸಕಿ ಶಕುಂತಳಾ ಶೆಟ್ಟಿ ಮೆಸ್ಕಾಂ ಇಲಾಖೆಯ ಅಧಿಕಾರಿಗಳನ್ನು ಎಚ್ಚರಿಸಿದರು.
ಪುತ್ತೂರು ತಾ.ಪಂ. ಸಭಾಂಗಣದಲ್ಲಿ ಬುಧವಾರ ನಡೆದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ವಿದ್ಯುತ್ ವಿತರಣೆಯಲ್ಲಿ ಸಮಾನತೆಯಿರಬೇಕು. ಅದರಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ಮೆಸ್ಕಾಂ ಮೇಲ್ಮಟ್ಟದ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಸ್ಪಂಧಿಸುತ್ತಿದ್ದಾರೆ. ಆದರೆ ಅವರ ಕೈಕೆಳಗಿನವರು ಮಾತ್ರ ಅಧಿಕಪ್ರಸಂಗಿತನ ಮಾಡುತ್ತಿದ್ದು, ಎಲ್ಲರೂ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಸೂಚಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಭಾಗದ ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ಮಂಜಪ್ಪ ಅವರು ಸಭೆಯಲ್ಲಿ ಅಹವಾಲು ಆಲಿಸಿ ಪ್ರತಿಕ್ರಿಯೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಮನೆಯೇ ಇಲ್ಲದಂತೆ ಮಾಡುವ ದೀನ ದಯಾಳ್ ಗ್ರಾಮ ವಿದ್ಯುತ್ ಯೋಜನೆ ಜಾರಿಗೊಂಡಿದೆ. ಇದಕ್ಕಾಗಿ ಈಗಾಗಲೇ ಮೆಸ್ಕಾಂ ವ್ಯಾಪ್ತಿಯಲ್ಲಿ ರೂ. 36 ಕೋಟಿ ರೂ. ಮೊತ್ತಕ್ಕೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಯೋಜನೆ ಹಿನ್ನಲೆಯಲ್ಲಿ ಬಿಪಿಎಲ್ ಕುಟುಂಬದ ಮನೆಗಳ ಸಮೀಕ್ಷೆ ನಡೆಸಲಾಗುತ್ತಿದೆ. ಈ ಸಮೀಕ್ಷೆಯಲ್ಲಿ ಯಾವುದೇ ಬಿಪಿಎಲ್ ಮನೆಗಳೂ ಬಿಟ್ಟು ಹೋಗದಂತೆ ಜನಪ್ರತಿನಿಧಿಗಳು ಸೇರಿದಂತೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ದೀನ್‌ದಯಾಳ್ ಗ್ರಾಮ ವಿದ್ಯುತ್ ಯೋಜನೆಗೆ ಒಳಪಟ್ಟಂತೆ ಯಾವುದಾದರೂ ಬಿಪಿಎಲ್ ಮನೆಗಳು ವಿದ್ಯುತ್ ಸಂಪರ್ಕ ಇಲ್ಲದೆ ಬಾಕಿ ಇದ್ದರೆ ಅವುಗಳನ್ನು ಪಟ್ಟಿಗೆ ಸೇರಿಸಿಕೊಳ್ಳಲಾಗುತ್ತದೆ. ಸಮೀಕ್ಷೆ ಮುಗಿದ ಬಳಿಕ ಕ್ರಿಯಾಯೋಜನೆ ತಯಾರಿಸಿ ಕಾಮಗಾರಿ ಆರಂಭಿಸಲಾಗುವುದು. ಯೋಜನೆಯಲ್ಲಿ ಬಳಸುವ ಕಂಬದಿಂದ ಹಿಡಿದು ಪ್ರತಿಯೊಂದು ಉಪಕರಣಗಳ ಮೇಲೆ ದೀನದಯಾಳ್ ಎಂಬ ಸೀಲ್ ಇರುತ್ತದೆ. ಪ್ರತೀ ಉಪಕರಣಗಳನ್ನು ಪರಿಶೀಲನೆಗೆ ಒಪ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಯಾವುದಾದರೂ ತುರ್ತು ವಿದ್ಯುತ್ ಕಾಮಗಾರಿಗಳಿದ್ದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮೆಸ್ಕಾಂ ಗಮನಕ್ಕೆ ತಂದರೆ ಅದನ್ನು ದೀನದಯಾಳ್ ಯೋಜನೆಯಲ್ಲಿ ಸೇರಿಸಲು ಸಾಧ್ಯವಿದ್ದರೆ ಸೇರಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ್, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಗೌಡ, ಮೆಸ್ಕಾಂ ನಿರ್ದೇಶಕಿ ಮಲ್ಲಿಕಾ ಪಕ್ಕಳ, ಪುತ್ತೂರು ಗ್ರಾಮಾಂತರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಶಾಂತ್ ಪೈ, ಪುತ್ತೂರು ನಗರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ, ಮೆಸ್ಕಾಂ ಲೆಕ್ಕಪತ್ರ ಅಧಿಕಾರಿ ಮಹದೇವ, ಪುತ್ತೂರು ವಿಭಾಗ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿನುತಾ ಮತ್ತಿತರರು ಉಪಸ್ಥಿತರಿದ್ದರು.