"ಗುಂಡು" ಯಾವ ಧರ್ಮದವರು ಎಂದು ನೋಡುವುದಿಲ್ಲ: ಅಮರ್‌ನಾಥ್ ಯಾತ್ರಿಗಳನ್ನು ರಕ್ಷಿಸಿದ ಸಲೀಂ ಮಿರ್ಜಾ

Update: 2017-07-12 15:27 GMT

ಅಹ್ಮದಾಬಾದ್, ಜು.12: ಸಾವು ಅಥವಾ ಬುಲೆಟ್ ಯಾವ ಧರ್ಮದವರು ಎಂದು ನೋಡುವುದಿಲ್ಲ ಎಂದು ಪ್ರಾಣದ ಹಂಗು ತೊರೆದು 50 ಮಂದಿ ಅಮರ್‌ನಾಥ್ ಯಾತ್ರಿಗಳನ್ನು ಭಯೋತ್ಪಾದಕ ದಾಳಿಯಿಂದ ರಕ್ಷಿಸಿದ ಬಸ್ ಚಾಲಕ ಸಲೀಂ ಮಿರ್ಜಾ ಹೇಳಿದ್ದಾರೆ.

ಮಂಗಳವಾರ ಇಡೀ ದಿನ ಅಮರ್‌ನಾಥ್ ಯಾತ್ರಿಕರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ಬಗ್ಗೆ ಹಲವು ರಾಜಕಾರಣಿಗಳು ಮಾತಾಡಿರುವುದನ್ನು ನೋಡಿದೆ. ನನಗೆ ರಾಜಕೀಯ ಅರ್ಥವಾಗುವುದಿಲ್ಲ. ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂಬ ದುಃಖ ನನಗಿದೆ. ಈ ದಾಳಿಯಲ್ಲಿ ಅಲ್ಪಸ್ಪಲ್ಪ ಗಾಯಗಳಾಗಿ ಪಾರಾದವರು ನನಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನೀನು ನಮ್ಮನ್ನು ರಕ್ಷಿಸಿದೆ ಎಂದು ಹಲವರು ಹೇಳುತ್ತಿದ್ದಾರೆ. ಆದರೆ, ನನಗೆ ಪ್ರತಿಕ್ರಿಯಿಸಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಘಟನೆ ನಡೆದ ಸ್ಥಳದಲ್ಲಿನ ರಕ್ತ, ಸಾವು ನನ್ನನ್ನು ಭೀತನನ್ನಾಗಿ ಮಾಡಿದೆ. ಭಯೋತ್ಪಾದಕ ದಾಳಿಯ 90 ನಿಮಿಷಗಳ ಬಳಿಕ ನಾನು ಆಘಾತದಿಂದ ಹೊರಬಂದೆ.

ಆರಂಭದ ಕೆಲವು ಬುಲೆಟ್‌ಗಳ ಬಳಿಕ ನಾನು ಬಸ್‌ನ ಸೀಟಿನಿಂದ ಕೆಳಗೆ ಕುಳಿತೆ. ಬಸ್ ಯಾವ ಕಡೆ ಹೋಗುತ್ತಿದೆ ಎಂದು ನನಗೆ ಗೊತ್ತೇ ಆಗುತ್ತಿರಲಿಲ್ಲ. ಆದರೆ, ಸ್ಟಿಯರಿಂಗ್ ವ್ಹೆಲ್ ಅನ್ನು ಬಿಡಲಿಲ್ಲ. ನಾನು ಭಾರತೀಯ ಎಂಬುದಕ್ಕೆ ನನಗೆ ಹೆಮ್ಮೆ ಇದೆ. ನನಗೆ ರಾಜಕೀಯ ಅರ್ಥವಾಗುವುದಿಲ್ಲ. ದೇಶದಲ್ಲಿ ಶಾಂತಿ ಇರಬೇಕು ಎಂದು ನಾನು ಬಯಸುತ್ತೇನೆ. ಯಾಕೆಂದರೆ ನನ್ನಂತವರು ಜೀವನ ನಡೆಸಲು ಸಂಪಾದಿಸಬೇಕೆಂದರೆ ದೇಶದಲ್ಲಿ ಶಾಂತಿ ಇರಬೇಕು.

ಅಲ್ಲಾಹ್ ಹಾಗೂ ಶಿವ ನನಗೆ ಮಾರ್ಗದರ್ಶನ ನೀಡಿದ. ನಾನು ಬುದ್ಧಿವಂತ ವ್ಯಕ್ತಿ ಅಲ್ಲ. ನನಗೆ ಈ ಧೈರ್ಯ ಎಲ್ಲಿಂದ ಬಂತು ಎಂದು ನನಗೇ ಗೊತ್ತಿಲ್ಲ. ನಾನು ಅಮರ್‌ನಾಥ್ ದರ್ಶನಕ್ಕೆ ಹೋಗುತ್ತೇನೆ. ಅಲ್ಲಿಂದ ನನ್ನ ಮನೆಯವರಿಗಾಗಿ ಪ್ರಸಾದ ತೆಗೆದುಕೊಂಡು ಹೋಗುತ್ತೇನೆ. ನಾನು ಶಿಕ್ಷಿತ ಅಲ್ಲ. ರಾಜಕಾರಣಿಗಳ ಹಾಗೆ ಹೇಳಿಕೆ ನೀಡಲು ನನಗೆ ಬರುವುದಿಲ್ಲ. ಆದರೆ, ನಾನು ಭಾರತೀಯ ಎಂದು ಹೇಳಲು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.

 ಭಗವಂತ ನನಗೆ ಧೈರ್ಯ ನೀಡಿದ. ಭಯೋತ್ಪಾದಕರು ನಿರಂತರ ಗುಂಡಿನ ಮಳೆ ಸುರಿಸುತ್ತಿದ್ದರೂ ನಾನು ಬಸ್ ಚಲಾಯಿಸಿಕೊಂಡು ಬಂದು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಿದೆ. ಅನಂತರ ಸೇನಾ ಸಿಬ್ಬಂದಿ ನನಗೆ ಧೈರ್ಯ ತುಂಬಿದರು. ಸೇನಾ ಸಿಬ್ಬಂದಿ ತುಂಬಾ ಸಹಕಾರ ನೀಡಿದರು. ಅಲ್ಲದೆ ನನ್ನ ಮೊಬೈಲ್ ಸಂಖ್ಯೆ ಪಡೆದುಕೊಂಡರು. ನನ್ನ ಬಸ್ ಮೇಲೆ ದಾಳಿ ನಡೆಸಿದ ಭಯೋತ್ಪಾದಕರನ್ನು ಶೋಧಿಸುವುದಾಗಿ ಹೇಳಿದರು. ಭಯೋತ್ಪಾದಕರು ಸಿಕ್ಕಿದರೆ ಫೋನ್ ಮಾಡಿ ತಿಳಿಸುವುದಾಗಿ ಹೇಳಿದರು ಎಂದು ಸಲೀಂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News