ನಾಪತ್ತೆಯಾದ ಗೃಹಿಣಿಯ ಮೃತದೇಹ ಬಾವಿಯಲ್ಲಿ ಪತ್ತೆ
ಮಂಜೇಶ್ವರ, ಜು.12: ಮಂಗಳವಾರ ಬೆಳಿಗ್ಗೆಯಿಂದ ದಿಢೀರ್ ನಾಪತ್ತೆಯಾದ ಗೃಹಿಣಿ ಮನೆಯಿಂದ ಅಲ್ಪದೂರದ ಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪೈವಳಿಕೆ ನಿವಾಸಿ, ನಿವೃತ್ತ ಶಾಲಾ ಪೇದೆ ಈಶ್ವರ ಶೆಟ್ಟಿಗಾರ್ ಎಂಬವರ ಪತ್ನಿ ಆಶಾಲತಾ(50)ರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಮಂಗಳವಾರ ಬೆಳಿಗ್ಗೆ ಹೊರಗೆ ಹೋದ ಆಶಾಲತಾ ದಿಢೀರ್ ನಾಪತ್ತೆಯಾಗಿದ್ದರು. ಇದರಿಂದ ಪತಿ, ಪುತ್ರಿ ಹುಡುಕಾಡುತ್ತಿದ್ದ ವೇಳೆ ಮನೆಯ 10 ಮೀಟರ್ ದೂರದ ಇವರ ಬಾವಿಯ ಬಳಿ ಚಪ್ಪಲಿ ಪತ್ತೆಯಾಗಿದೆ.
ಈ ಬಗ್ಗೆ ಮಾಹಿತಿ ತಿಳಿದ ಉಪ್ಪಳ ಅಗ್ನಿಶಾಮಕ ದಳ ಬಾವಿಯಲ್ಲಿ ಶೋಧ ನಡೆಸಿದಾಗ ಆಶಾಲತಾರ ಮೃತದೇಹ ಪತ್ತೆಯಾಗಿದೆ. ಬಾವಿಗೆ ಹಾರಿ ಆತ್ಮಹತ್ಯೆಗೈದಿರಬಹುದೆಂದು ಅಂದಾಜಿಸಲಾಗಿದೆ. ಮೃತರು ಪತಿ, ಮಕ್ಕಳಾದ ಪುತ್ರ, ಇಬ್ಬರು ಪುತ್ರಿಯರು, ಸಹೋದರರು, ಸಹೋದರಿಯರು ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಜೆ ಅಟ್ಟೆಗೋಳಿ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.