ಬದಿಯಡ್ಕ: ವಿದ್ಯಾರ್ಥಿನಿಯರಿಗೆ ಕೀಟಲೆ ನೀಡುತ್ತಿದ್ದಾತನ ಬಂಧನ
ಮಂಜೇಶ್ವರ, ಜು.12: ಬೆಳಿಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಶಾಲೆ ಬಿಡುವ ಸಮಯ ನೋಡಿ ಬೈಕ್‌ನಲ್ಲಿ ತಲುಪಿ ವಿದ್ಯಾರ್ಥಿನಿಯರಿಗೆ ಕೀಟಲೆ ನೀಡುತ್ತಿದ್ದ ಯುವಕನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಎಡನೀರು ಚಾತಪ್ಪಾಡಿ ನಿವಾಸಿ ನಿಝಾಮುದ್ದೀನ್ (20) ಎಂಬಾತ ಬಂಧಿತ ವ್ಯಕ್ತಿ. ಈತ ಕೆಲವು ದಿನಗಳಿಂದ ಬೈಕ್‌ನಲ್ಲಿ ಬದಿಯಡ್ಕಕ್ಕೆ ಬಂದು ಶಾಲೆ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದನೆಂದು ದೂರಲಾಗಿದೆ. ಈತ ಎಂದಿನಂತೆ ಮಂಗಳವಾರ ಬೆಳಿಗ್ಗೆಯೂ ಬದಿಯಡ್ಕದತ್ತ ಪ್ರಯಾಣ ಹೊರಟಿದ್ದನು. ಎಡನೀರಿಗೆ ತಲುಪಿದಾಗ ಬಸ್ಸೊಂದನ್ನು ಹಿಂದಿಕ್ಕಿ ಬೈಕ್ ಮುಂದೆ ಸಾಗಿದ್ದು, ಈ ವೇಳೆ ಆತನ ಬಗ್ಗೆ ತಿಳಿದ ಪ್ರಯಾಣಿಕರು ಬದಿಯಡ್ಕ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು, ಬದಿಯಡ್ಕ ಬಸ್ ನಿಲ್ದಾಣದಲ್ಲಿ ಆತನನ್ನು ಸೆರೆಹಿಡಿಯಲು ಮುಂದಾಗಿದ್ದಾರೆ. ಈವೇಳೆ ಆತ ಪೊಲೀಸರನ್ನು ದೂಡಿಹಾಕಿ ಪರಾರಿಯಾಗಲು ಯತ್ನಿಸಿದ್ದು ಕೂಡಲೇ ಪೊಲೀಸರು ಬೆನ್ನಟ್ಟಿ ಸೆರೆಹಿಡಿದರು.
ವಿದ್ಯಾರ್ಥಿನಿಯರಿಗೆ ಕೀಟಲೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಂತೆ ನಿಜಾಮುದ್ದೀನ್ ವಿರುದ್ಧ ಕೇಸು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.