ತೀರ್ಥಹಳ್ಳಿಯಲ್ಲಿ ಅಪಘಾತ: ಉಡುಪಿಯ ಮಹಿಳೆ ಮೃತ್ಯು
ಉಡುಪಿ, ಜು.12: ತೀರ್ಥಹಳ್ಳಿಯ ಯಡೇಹಳ್ಳಿ ಎಂಬಲ್ಲಿ ಇಂದು ಬೆಳಗ್ಗೆ ಲಾರಿ ಹಾಗೂ ಕಾರಿನ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಉಡುಪಿ ಸಂತೆಕಟ್ಟೆ ಸಮೀಪದ ನೇಜಾರಿನ ಮಹಿಳೆಯೊಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ.
ಮೃತರನ್ನು ನೇಜಾರಿನ ಮೆಹರುನ್ನೀಸಾ (65) ಎಂದು ಗುರುತಿಸಲಾಗಿದೆ.
ನೇಜಾರಿನ ಅಬ್ದುಲ್ ರಝಾಕ್ ಎಂಬವರ ಪತ್ನಿ ಸಾಹಿರಾ ಬಾನು (45), ಅವರ ಮಕ್ಕಳಾದ ರಿಹಾನ್(19), ಅಬ್ದುಲ್ ರಿಝ್ವಾನ್(22) ಹಾಗೂ ಅಣ್ಣನ ಮಗ ಮುಝಮ್ಮಿಲ್(22) ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾಹಿರಾ ಬಾನು ಅವರ ಕುಟುಂಬ ಸಾಗರದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಇಂದು ಬೆಳಗ್ಗೆ ಮಾರುತಿ ರಿಡ್ಝ್ ಕಾರಿನಲ್ಲಿ ಹೊರಟಿದ್ದು, ಕಾರನ್ನು ಅವರ ಮಗ ರಿಝ್ವಾನ್ ಚಾಲನೆ ಮಾಡುತ್ತಿದ್ದರು. ಈ ವೇಳೆ ಎದುರಿನಿಂದ ಬದ ಲಾರಿಯು ಕಾರಿಗೆ ಮುಖಾಮುಖಿ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.ಇದರಿಂದ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ಸಾಹಿರಾ ಬಾನು ಅವರ ತಾಯಿ ಮೆಹರುನ್ನೀಸಾ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದುಬಂದಿದೆ.
ಗಾಯಗೊಂಡ ಇತರರನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಇವರಲ್ಲಿ ಸಾಹಿರಾ ಬಾನು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಬ್ದುಲ್ ರಝಾಕ್ ಕುವೈಟ್‌ನಲ್ಲಿ ಉದ್ಯೋಗದಲ್ಲಿದ್ದಾರೆ.