×
Ad

ಅಪಘಾತ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ ಡಿವೈಎಸ್ಪಿ

Update: 2017-07-12 21:40 IST

ಉಡುಪಿ, ಜು.12: ಅಂಬಾಗಿಲು ವೆಂಕಟರಮಣ ದೇವಸ್ಥಾನ ಸಮೀಪದ ನ್ಯಾಚುರಲ್ ಗ್ರಾನೈಟ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಮಧ್ಯಾಹ್ನ ಲಾರಿಯೊಂದು ಬಸ್ಸಿಗೆ ಹಿಂದಿನಿಂದ ಢಿಕ್ಕಿ ಹೊಡೆದು ಹಲವು ಮಂದಿ ಪ್ರಯಾಣಿಕರು ಗಾಯಗೊಂಡ ಬಗ್ಗೆ ವರದಿಯಾಗಿದೆ.

ಕೊಲ್ಲೂರಿನಿಂದ ಉಡುಪಿಗೆ ಬರುತ್ತಿದ್ದ ವಿಜಯಲಕ್ಷ್ಮಿ ಖಾಸಗಿ ವೇಗದೂತ ಬಸ್‌ನ ಎದುರುಗಡೆ ಹೋಗುತ್ತಿದ್ದ ಬೈಕ್ ಸ್ಕೀಡ್ ಆಗಿ ರಸ್ತೆಗೆ ಬಿತ್ತೆನ್ನಲಾಗಿದೆ. ಇದನ್ನು ನೋಡಿದ ಬಸ್ ಚಾಲಕ ಒಮ್ಮೇಲೆ ಬ್ರೇಕ್ ಹಾಕಿದನು. ಆಗ ಮಹಾ ರಾಷ್ಟ್ರದಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಲಾರಿಯು ಬಸ್ ಹಿಂದಿನಿಂದ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಈ ಅಪಘಾತದಿಂದ ಬೈಕಿನಲ್ಲಿದ್ದ ದಂಪತಿ ಹಾಗೂ ಬಸ್ಸಿನಲ್ಲಿದ್ದ ನಾರಾಯಣ ಟಿ. ಸೇರಿದಂತೆ ಆರು ಮಂದಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡರು. ಅದೇ ದಾರಿಯಲ್ಲಿ ಬ್ರಹ್ಮಾವರದಿಂದ ಉಡುಪಿಗೆ ಕಡೆ ಬರುತ್ತಿದ್ದ ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ ತಕ್ಷಣ ತನ್ನ ವಾಹನವನ್ನು ನಿಲ್ಲಿಸಿ ಗಾಯಗೊಂಡ ವೃದ್ಧರು, ಮಹಿಳೆಯರು ಸಹಿತ ಎಂಟು ಮಂದಿಯನ್ನು ಉಪಚರಿಸಿದರು. ಅವರಿಗೆ ತಕ್ಷಣವೇ ಚಿಕಿತ್ಸೆಯ ಅಗತ್ಯವನ್ನು ಅರಿತ ಡಿವೈಎಸ್ಪಿ ಅಂಬ್ಯುಲೆನ್ಸ್‌ಗೆ ಕಾಯದೆ ತನ್ನದೇ ಇಲಾಖೆ ವಾಹನದಲ್ಲಿ ಎಂಟು ಮಂದಿ ಗಾಯಾಳುಗಳನ್ನು ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದರು.

ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News