ಬಾವುಟಗುಡ್ಡೆ ಹೆಸರು ಉಳಿಸಲು ತುಳುನಾಡ ವೇದಿಕೆ ಒತ್ತಾಯ
ಮಂಗಳೂರು, ಜು. 12: ನಗರದ ಬಾವುಟ ಗುಡ್ಡ ಹೆಸರನ್ನು ಬದಲಾಯಿಸುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಅವರು, ಪ್ರಸ್ತುತ ಇರುವ ಬಾವುಟಗುಡ್ಡ ಹೆಸರನ್ನೇ ಉಳಿಸಬೇಕೆಂದು ಒತ್ತಾಯ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ರಸ್ತೆಗೆ ಈಗಾಗಲೇ ನಗರದ ಅಂಬೇಡ್ಕರ್ ವೃತ್ತ ಬಳಿ ಇರುವ ವಿಜಯಾ ಬ್ಯಾಂಕ್ ಮುಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರು, ಸೈಂಟ್ ಅಲೋಶಿಯಸ್ ಕಾಲೇಜು ರಸ್ತೆ ಇಡಬೇಕೆಂಬ ಒತ್ತಾಯಗಳು ಕೇಳಿ ಬರುವ ನಡುವೆ ಮುಸ್ಲಿಮ್ ಸಂಘಟನೆಯವರು ಈದ್ಗಾ ಮೈದಾನ ಹೆಸರನ್ನಿಡಬೇಕೆಂದು ಒತ್ತಾಯ ಮಾಡಿದೆ. ಆದ್ದರಿಂದ ತುಳುನಾಡಿನ ಸ್ವಾತಂತ್ರ ಹೋರಾಟಗಾರರನ್ನು ನೆನಪಿಸುವ ಈ ರಸ್ತೆಗೆ ಬಾವುಟಗುಡ್ಡ ಹೆಸರೇ ಸೂಕ್ತವಾಗಿದ್ದು, ಅದನ್ನು ಬದಲಾಯಿಸದೆ ಉಳಿಸಬೇಕೆಂದು ಅವರು ಒತ್ತಾಯ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಕೋಶಾಧಿಕಾರಿ ಅಬ್ದುರ್ರಶೀದ್, ಆನಂದ ಅಮಿತ್, ಗಂಗಾಧರ, ರಕ್ಷಿತ್ ಕೆ., ಕಾಮಾಕ್ಷಿ, ಪ್ರಕಾಶ್, ರಾಝಿಕ್ ಉಳ್ಳಾಲ ಮೊದಲಾದವರು ಉಪಸ್ಥಿತರಿದ್ದರು.
ರಾಝಿಕ್ ಉಳ್ಳಾಲರಿಗೆ ಸನ್ಮಾನ:
ಇತ್ತೀಚೆಗೆ ಉಳ್ಳಾಲ ಬೀಚ್‌ನಲ್ಲಿ ಸಮುದ್ರ ಪಾಲಾಗಿ ಕಲ್ಲಿನೆಡೆಯಲ್ಲಿ ಸಿಲುಕಿದ್ದ ಮೃತದೇಹವೊಂದನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿರುವ ತುಳುನಾಡ ರಕ್ಷಣಾ ವೇದಿಕೆಯ ಕಾರ್ಮಿಕ ಘಟಕದ ಅಧ್ಯಕ್ಷ ರಾಝಿಕ್ ಉಳ್ಳಾಲ ಅವರನ್ನು ಇದೇ ಸಂದರ್ಭದಲ್ಲಿ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಅವರು ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಿದರು.