×
Ad

ಅಮೆರಿಕದ ನೂತನ ನಿಯಮದಿಂದ ಭಾರತೀಯ ವಿದ್ಯಾರ್ಥಿಗಳಿಗೆ ಹೊಡೆತ

Update: 2017-07-12 21:50 IST

ವಾಶಿಂಗ್ಟನ್, ಜು. 12: ಭಾರತೀಯರು ಸೇರಿದಂತೆ ಅಮೆರಿಕದಲ್ಲಿ ಕಲಿಯುತ್ತಿರುವ ವಿದೇಶಿ ವಿದ್ಯಾರ್ಥಿಗಳು ಆತಂಕದ ದಿನಗಳನ್ನು ಎದುರಿಸುತ್ತಿದ್ದಾರೆ. ಆಂತರಿಕ ಭದ್ರತೆ ಇಲಾಖೆಯು ಪರಿಗಣಿಸುತ್ತಿರುವ ನಿಯಮವೊಂದಕ್ಕೆ ಡೊನಾಲ್ಡ್ ಟ್ರಂಪ್ ಸರಕಾರ ಅನುಮೋದನೆ ನೀಡಿದರೆ, ವಿದೇಶಿ ವಿದ್ಯಾರ್ಥಿಗಳು ಅಮೆರಿಕದಲ್ಲಿ ವಾಸಿಸಲು ಪ್ರತಿ ವರ್ಷ ಅನುಮತಿಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ದೃಷ್ಟಿಯಿಂದ ಆಡಳಿತವು ಈ ನಿಯಮವನ್ನು ರೂಪಿಸಿದೆ ಎಂದು ‘ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.

ಆದರೆ, ಅದು ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಅನುಮೋದನೆಗೊಂಡರೆ ಜಾರಿಯಾಗಲು 18 ತಿಂಗಳುಗಳಾದರೂ ಬೇಕಾಗಬಹುದು.

2016ರಲ್ಲಿ ಅಮೆರಿಕದ ಕಾಲೇಜುಗಳಲ್ಲಿ ಸುಮಾರು 1.66 ಲಕ್ಷ ಭಾರತೀಯ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಭಾರತ ಮತ್ತು ಚೀನಾದ ವಿದ್ಯಾರ್ಥಿಗಳು ಅಮೆರಿಕದಲ್ಲಿರುವ ಎಲ್ಲ ವಿದೇಶಿ ವಿದ್ಯಾರ್ಥಿಗಳ 47 ಶೇಕಡದಷ್ಟಿದ್ದಾರೆ ಎಂದು ‘ಓಪನ್ ಡೋರ್’ ಎಂಬ ಸರಕಾರಿ ಸಂಘಟನೆಯೊಂದು ತಿಳಿಸಿದೆ.

 ಈ ನಿಯಮದ ಪ್ರಕಾರ, ವಿದ್ಯಾರ್ಥಿಗಳು ತಮ್ಮ ಕೋರ್ಸ್‌ನ ಅಂತಿಮ ದಿನಾಂಕವನ್ನು ನಮೂದಿಸಬೇಕಾಗುತ್ತದೆ. ಹಾಗಾಗಿ, ವಿದ್ಯಾರ್ಥಿಗಳು ಒಂದು ಕೋರ್ಸ್‌ನಿಂದ ಇನ್ನೊಂದು ಕೋರ್ಸ್‌ಗೆ, ಉದಾಹರಣೆಗೆ ಅಂಡರ್‌ಗ್ಯಾಜುಯೇಟ್‌ನಿಂದ ಗ್ರಾಜುಯೇಶನ್‌ಗೆ ಹೋದರೆ ವಾಸ್ತವ್ಯ ಅನುಮತಿಗಾಗಿ ಮರು ಅರ್ಜಿ ಸಲ್ಲಿಸಬೇಕಾಗುತ್ತದೆ.

ಈ ನಿಯಮಗಳು ಅಮೆರಿಕದಲ್ಲಿ ಅಧ್ಯಯನ ಮಾಡುವುದನ್ನು ದುಬಾರಿ ಮತ್ತು ತ್ರಾಸದಾಯಕವಾಗಿಸುತ್ತದೆ. ಹಾಗಾಗಿ, ಅಲ್ಲಿನ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳೇ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News