ಗಂಗೆಯಿಂದ 500 ಮೀ.ಅಂತರದೊಳಗೆ ತ್ಯಾಜ್ಯ ಸುರಿದರೆ 50,000 ರೂ.ದಂಡ
ಹೊಸದಿಲ್ಲಿ,ಜು.13: ಗಂಗಾ ನದಿಯಲ್ಲಿ ತ್ಯಾಜ್ಯಗಳನ್ನೆಸೆಯುವವರು ಇನ್ನು ಮುಂದೆ ಹಾಗೆ ಮಾಡುವ ಮುನ್ನ ಎರಡೆರಡು ಬಾರಿ ಯೋಚಿಸಬೇಕಾಗುತ್ತದೆ. ಗಂಗಾ ನದಿಗೆ ತ್ಯಾಜ್ಯಗಳನ್ನೆಸೆದು ಪರಿಸರ ಹಾನಿಗೆ ಕಾರಣರಾಗುವವರಿಗೆ 50,000 ರೂ.ಗಳ ದಂಡ ವಿಧಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ)ಯು ಸುದೀರ್ಘ ಕಾಲದಿಂದ ವಿಚಾರಣೆ ನಡೆಯುತ್ತಿದ್ದ ಗಂಗಾ ಶುದ್ಧೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ನೀಡಿದ ತನ್ನ ತೀರ್ಪಿನಲ್ಲಿ ತಿಳಿಸಿದೆ. ಇದೇ ವೇಳೆ ಗಂಗಾ ಶುದ್ಧೀಕರಣಕ್ಕಾಗಿ ಹಲವಾರು ಕ್ರಮಗಳು ಮತ್ತು ಅವುಗಳ ಅನುಷ್ಠಾನಕ್ಕಾಗಿ ಕಟ್ಟುನಿಟ್ಟಿನ ಗಡುವುಗಳನ್ನೂ ಅದು ಪ್ರಕಟಿಸಿದೆ.
ಉತ್ತರ ಪ್ರದೇಶದ ಹರಿದ್ವಾರದಿಂದ 500 ಕಿ.ಮೀ.ದೂರದ ಉನ್ನಾವ್‌ವರೆಗೆ ಗಂಗಾನದಿಯ ದಂಡೆಯುದ್ದಕ್ಕೂ ಶುದ್ಧೀಕರಣಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳು ವಂತೆ ಎನ್‌ಜಿಟಿಯು 543 ಪುಟಗಳ ತನ್ನ ಬೃಹತ್ ತೀರ್ಪಿನಲ್ಲಿ ಸರಕಾರಕ್ಕೆ ನಿರ್ದೇಶ ನೀಡಿದೆ.
ಈ 500 ಕೀ.ಮೀ.ತೀರವು ನದಿಯಲ್ಲಿ ತ್ಯಾಜ್ಯನೀರನ್ನು ವಿಸರ್ಜಿಸುವ 86 ಒಳಚರಂಡಿಗಳನ್ನು ಒಳಗೊಂಡಿದೆ. ಈ ಎಲ್ಲ ಒಳಚರಂಡಿಗಳಲ್ಲಿಯ ಹೂಳು ತೆಗೆಯುವಂತೆ ಸೂಚಿಸಿರುವ ಎನ್‌ಜಿಟಿ ಅದಕ್ಕಾಗಿ ಆರು ವಾರಗಳ ಗಡುವು ವಿಧಿಸಿದೆ. ಇತರ ಯೋಜನೆಗಳ ಕಾಮಗಾರಿ ಈ ವರ್ಷವೇ ಆರಂಭಗೊಳ್ಳಬೇಕು ಮತ್ತು ಪೈಪ್‌ಲೈನ್‌ಗಳನ್ನು ಅಳವಡಿಸುವ ಕಾರ್ಯ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಬೇಕು ಎಂದೂ ಅದು ತಾಕೀತು ಮಾಡಿದೆ. ಗಂಗಾ ಮತ್ತು ಅದರ ಉಪನದಿಗಳ ತೀರದಿಂದ 500 ಮೀ.ಅಂತರದೊಳಗೆ ತ್ಯಾಜ್ಯಗಳನ್ನು ಹಾಕುವವರಿಗೆ 50,000 ರೂ.ಗಳ ದಂಡವನ್ನು ವಿಧಿಸುವಂತೆ ಎನ್‌ಜಿಟಿಯು ತನ್ನ ತೀರ್ಪಿನಲ್ಲಿ ಆದೇಶಿಸಿದೆ. ನದಿಯ ಅಂಚಿನಿಂದ 100 ಮೀ.ವರೆಗಿನ ಪ್ರದೇಶವನ್ನು ‘ಶೂನ್ಯ ಅಭಿವೃದ್ಧಿ ವಲಯ’ ಎಂದು ಘೋಷಿಸಿರುವ ಎನ್‌ಜಿಟಿ, ಅದನ್ನು ಹಸಿರು ಪ್ರದೇಶವನ್ನಾಗಿ ಪರಿವರ್ತಿಸಲು ಸೂಚಿಸಿದೆ.
‘ನಾವು ನಿಮ್ಮಂತೆ ಅವರಿವರನ್ನು ದೂರುವುದಿಲ್ಲ ’ಎಂದು ಸರಕಾರಿ ಸಂಸ್ಥೆಗಳನ್ನು ಕುಟುಕಿದ ಎನ್‌ಜಿಟಿ ಅಧ್ಯಕ್ಷ ನ್ಯಾ.ಸ್ವಂತಂತರ್ ಕುಮಾರ್ ಅವರು, ಗಂಗಾ ಶುದ್ಧೀಕರಣ ವೊಂದು ‘ಅಸಾಮಾನ್ಯ’ ಕಾರ್ಯವಾಗಿದೆ ಎಂದು ಬಣ್ಣಿಸಿದರು.
ಗಂಗಾ ಶುದ್ಧೀಕರಣವು 20,000 ಕೋ.ರೂ. ವೆಚ್ಚದ ರಾಷ್ಟ್ರೀಯ ಯೋಜನೆಯಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಘೊಷಣೆಯ ಹಿನ್ನೆಲೆಯಲ್ಲಿ ಎನ್‌ಜಿಟಿಯು, ಹಣಕಾಸಿನ ಯಾವುದೇ ಕೊರತೆಯಿಲ್ಲ ಎಂದು ಹೇಳಿತು.
1986ರಿಂದ ಈ ವರ್ಷದ ಜೂನ್ 30ರವರೆಗೆ ಗಂಗೆ ಮತ್ತ ಅದರ ಉಪನದಿಗಳ ಶುದ್ಧೀಕರಣಕ್ಕಾಗಿ ಸರಕಾರವು 4,800 ಕೋ.ರೂ.ಗೂ ಅಧಿಕ ಮೊತ್ತವನ್ನು ವ್ಯಯಿಸಿದೆ.
ವಿವಿಧ ಸಚಿವಾಲಯಗಳ ಪ್ರತಿನಿಧಿಗಳು, ತಜ್ಞರು ಮತ್ತು ರಾಜ್ಯ ಸರಕಾರಿ ಅಧಿಕಾರಿಗಳನ್ನೊಳಗೊಂಡ ಉಸ್ತುವಾರಿ ಮತ್ತು ಅನುಷ್ಠಾನ ಸಮಿತಿಗಳ ರಚನೆಯನ್ನೂ ನ್ಯಾಯಮಂಡಳಿಯು ಪ್ರಕಟಿಸಿತು. ಈ ಸಮಿತಿಗಳು ತೀರ್ಪಿನಲ್ಲಿ ಹೇಳಲಾಗಿರುವ ಕ್ರಮಗಳ ಅನುಷ್ಠಾನಕ್ಕಾಗಿ ಕ್ರಿಯಾ ಯೋಜನೆಗಳನ್ನು ರೂಪಿಸುವ ಹೊಣೆಯನ್ನು ಹೊಂದಿರುತ್ತವೆ.
ಎನ್‌ಜಿಟಿಯು ತನ್ನ ತೀರ್ಪಿನಲ್ಲಿ ತಿಳಿಸಿರುವ ಕ್ರಮಗಳು ಪೂರ್ಣವಾಗಿ ಅನುಷ್ಠಾನ ಗೊಂಡರೆ ಗಂಗಾನದಿಯಲ್ಲಿನ ಮಾಲಿನ್ಯದ ಮಟ್ಟವು ಶೇ.27ರಷ್ಟು ತಗ್ಗುವ ನಿರೀಕ್ಷೆಯಿದೆ.