ಸಿಕ್ಕಿಂ ಗಡಿ ಬಿಕ್ಕಟ್ಟು: ನಾಳೆ ಸರ್ವಪಕ್ಷ ಸಭೆ
ಹೊಸದಿಲ್ಲಿ, ಜು.13: ಶುಕ್ರವಾರ ನಡೆಯಲಿರುವ ಸರ್ವ ಪಕ್ಷಗಳ ಸಭೆಯಲ್ಲಿ ಸಿಕ್ಕಿಂ ಗಡಿಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕುರಿತು ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ವಿವರ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗಡಿ ಭಾಗದಲ್ಲಿ ಉಭಯ ದೇಶಗಳ ಮಧ್ಯೆ ಇತ್ತೀಚಿನ ದಿನಗಳಲ್ಲೇ ಅತ್ಯಧಿಕ ಸಮಯದಿಂದ ತಲೆದೋರಿರುವ ಬಿಕ್ಕಟ್ಟು ಮತ್ತು ದ್ವಿಪಕ್ಷೀಯ ಸಂಬಂಧದ ಮೇಲೆ ಇದು ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್ ಅವರ ನಿವಾಸದಲ್ಲಿ ಈ ಸಭೆ ನಡೆಯಲಿದೆ. ಮುಂಬರುವ ಮಳೆಗಾಲದ ಅಧಿವೇಶನಕ್ಕೂ ಮುನ್ನ ವಿಪಕ್ಷಗಳಿಗೆ ಸಿಕ್ಕಿಂ ಬಿಕ್ಕಟ್ಟಿನ ಇತ್ತೀಚಿನ ಬೆಳವಣಿಗೆ ಕುರಿತು ವಿವರ ನೀಡುವ ಮೂಲಕ, ಈ ಪ್ರಮುಖ ವಿಷಯದಲ್ಲಿ ಸಹಮತ ಸಾಧಿಸುವುದು ಸರಕಾರದ ಇರಾದೆಯಾಗಿದೆ.
ಸಿಕ್ಕಿಂನ ದೋಕ್ಲಂ ಪ್ರದೇಶದಲ್ಲಿರುವ ತ್ರಿರಾಷ್ಟ್ರ ಗಡಿ ಸಂಧಿ ಸ್ಥಳದ (ಭಾರತ-ಚೀನಾ- ಭೂತಾನ್) ಯಥಾಸ್ಥಿತಿಯನ್ನು ಮಾರ್ಪಾಡು ಮಾಡಲು ಚೀನಾ ಪ್ರಯತ್ನಿಸುತ್ತಿರುವುದು ಕಳವಳಕಾರಿಯಾಗಿದೆ ಎಂದು ಭಾರತ ಹೇಳಿದೆ. ಸಂಬಂಧಿತ ಪಕ್ಷ(ಭೂತಾನ್)ವನ್ನು ವಿಶ್ವಾಸಕ್ಕೆ ಪಡೆದುಕೊಳ್ಳದೆ ಚೀನ ಏಕಪಕ್ಷೀಯವಾಗಿ ಇಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಭಾರತ ಹೇಳುತ್ತಿದೆ. ತ್ರಿರಾಷ್ಟ್ರ ಸಂಧಿ ಸ್ಥಳದಲ್ಲಿ ರಸ್ತೆ ನಿರ್ಮಿಸಲು ಚೀನ ನಡೆಸುತ್ತಿರುವ ಪ್ರಯತ್ನದ ಬಗ್ಗೆ ಭೂತಾನ್ ಈಗಾಗಲೇ ಪ್ರತಿಭಟನೆ ಸಲ್ಲಿಸಿದೆ. ಭೂತಾನ್ ಮತ್ತು ಚೀನಾದ ಮಧ್ಯೆ ರಾಜತಾಂತ್ರಿಕ ಸಂಬಂಧವಿಲ್ಲ.