‘ವಂದೇ ಮಾತರಂ’ ಹಾಡಿನ ಮೂಲ ಸಂಸ್ಕೃತ , ಲಿಪಿ ಬಂಗಾಲಿ :ತಮಿಳುನಾಡು ಎಜಿ
ಚೆನ್ನೈ, ಜು.13: ವಂದೇ ಮಾತರಂ ಸಂಸ್ಕೃತ ಮೂಲದ ಹಾಡಾಗಿದ್ದು ಇದನ್ನು ಬಂಗಾಲಿ ಲಿಪಿಯಲ್ಲಿ ಬಂಕಿಮಚಂದ್ರ ಚಟರ್ಜಿ ಬರೆದಿದ್ದಾರೆ ಎಂದು ತಮಿಳುನಾಡು ಅಡ್ವೊಕೇಟ್ ಜನರಲ್ ಆರ್.ಮುತ್ತುಕುಮಾರ ಸ್ವಾಮಿ ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಬಿಎಡ್ ಪದವೀಧರ ಕೆ.ವೀರಮಣಿ ಎಂಬವರಿಗೆ ಶಿಕ್ಷಕರ ನೇಮಕಾತಿಗೆ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ – ‘ವಂದೇ ಮಾತರಂ’ ಗೀತೆಯನ್ನು ಮೊದಲು ಯಾವ ಭಾಷೆಯಲ್ಲಿ ಬರೆಯಲಾಗಿದೆ ಎಂಬ ಪ್ರಶ್ನೆ ಕೇಳಲಾಗಿತ್ತು. ಇವರು ಬಂಗಾಲಿ ಭಾಷೆ ಎಂದು ಬರೆದಿದ್ದು ಇದು ತಪ್ಪು ಉತ್ತರ ಎಂದು ಪರೀಕ್ಷಾ ಮಂಡಳಿ ತಿಳಿಸಿತ್ತು. ನೇಮಕಾತಿಗೆ ಅರ್ಹರಾಗಲು ಕನಿಷ್ಟ 90 ಅಂಕದ ಅಗತ್ಯವಿದ್ದು ಇವರಿಗೆ 89 ಅಂಕ ದೊರೆತಿತ್ತು . ಈ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಜೂನ್ 7ರಂದು ಮೊದಲ ಬಾರಿ ವಿಚಾರಣೆ ನಡೆದ ಸಂದರ್ಭ, ಬಂಕಿಮಚಂದ್ರ ಚಟರ್ಜಿ ಗೀತೆಯನ್ನು ಬಂಗಾಲಿ ಮತ್ತು ಸಂಸ್ಕೃತ ಎರಡೂ ಭಾಷೆಯಲ್ಲಿ ಬರೆದಿದ್ದರು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರೆ , ಈ ಹಾಡನ್ನು ಸಂಸ್ಕೃತದಲ್ಲಿ ಬರೆಯಲಾಗಿದೆ ಮತ್ತು ಆ ಬಳಿಕ ಬಂಗಾಲಿ ಭಾಷೆಗೆ ಅನುವಾದಿಸಲಾಗಿದೆ ಎಂದು ಸರಕಾರದ ಪರ ವಕೀಲರು ವಾದಿಸಿದ್ದರು. ಆದರೆ ತಾನು ಅಧ್ಯಯನ ನಡೆಸಿದ ಪುಸ್ತಕಗಳಲ್ಲಿ ಈ ಗೀತೆಯನ್ನು ಮೊದಲು ಬಂಗಾಲಿ ಭಾಷೆಯಲ್ಲಿ ಎರಡು ಶತಮಾನಕ್ಕಿಂತಲೂ ಮೊದಲು ಬರೆದಿರುವುದಾಗಿ ಮಾಹಿತಿಯಿದೆ ಎಂದು ಅರ್ಜಿದಾರರು ಹೇಳಿದ್ದರು.
ಈ ಹಿನ್ನೆಲೆಯಲ್ಲಿ , ತಕ್ಷಣ ನ್ಯಾಯಾಲಯದೆದುರು ಹಾಜರಾಗಿ ಸರಿಯಾದ ಉತ್ತರವನ್ನು ತಿಳಿಸುವಂತೆ ನ್ಯಾಯಾಲಯ ಅಡ್ವೊಕೇಟ್ ಜನರಲ್(ಎಜಿ)ಗೆ ಸೂಚಿಸಿತ್ತು. ಅದರಂತೆ ನ್ಯಾಯಾಲಯದೆದುರು ಹಾಜರಾದ ಎಜಿ, ವಂದೇಮಾತರಂ ಸಂಸ್ಕೃತ ಮೂಲದ್ದಾಗಿದ್ದು ಇದನ್ನು ಬಂಗಾಲಿ ಲಿಪಿಯಲ್ಲಿ ಬರೆಯಲಾಗಿದೆ ಎಂದು ಹೇಳಿದ್ದಾರೆ. ಇದೀಗ ಜುಲೈ 17ರಂದು ಪ್ರಕರಣದ ಬಗ್ಗೆ ತೀರ್ಪು ನೀಡುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ.