×
Ad

ಕಾಶ್ಮೀರ ವಿಷಯದಲ್ಲಿ ನಿಮ್ಮ ಮಧ್ಯಸ್ಥಿಕೆ ಬೇಡ: ಚೀನಕ್ಕೆ ಭಾರತದ ತಿರುಗೇಟು

Update: 2017-07-13 20:50 IST

ಹೊಸದಿಲ್ಲಿ,ಜು.13: ‘ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ’ಮೂಡಿಸಲು ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆಗೆ ನೆರವಾಗುವ ಚೀನಾದ ಕೊಡುಗೆ ರೂಪದ ಪ್ರಚೋದನೆಗೆ ಸೂಕ್ತ ತಿರುಗೇಟು ನೀಡಿರುವ ಭಾರತವು, ಅದೇನಿದ್ದರೂ ನಾವೇ ಬಗೆಹರಿಸಿಕೊಳ್ಳುತ್ತೇವೆ. ನಿಮ್ಮ ಮಧ್ಯಸ್ಥಿಕೆಯ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ ಒಂದು ತಿಂಗಳ ಹಿಂದೆ ಸೃಷ್ಟಿಯಾಗಿರುವ ಚೀನಾದೊಂದಿಗಿನ ಗಡಿ ಬಿಕ್ಕಟ್ಟನ್ನು ಬಗೆಹರಿಸಲು ರಾಜತಾಂತ್ರಿಕ ಮಾರ್ಗಗಳಿವೆ ಮತ್ತು ಅವುಗಳನ್ನು ಬಳಸಿಕೊಳ್ಳುತ್ತಿರುವುದಾಗಿ ತಿಳಿಸಿದೆ.

ಕಾಶ್ಮೀರ ಕುರಿತು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ. ಆದರೆ ಮೂರನೇ ದೇಶದ ಮಧ್ಯಸ್ಥಿಕೆ ಬೇಕಿಲ್ಲ. ನಮ್ಮ ನಿಲುವು ಅತ್ಯಂತ ಸ್ಪಷ್ಟವಾಗಿದೆ. ಗಡಿಯಾಚೆಯ ಭಯೋತ್ಪಾದನೆ ಇಲ್ಲಿರುವ ಏಕೈಕ ಪ್ರಶ್ನೆಯಾಗಿದ್ದು, ಅದು ದೇಶದಲ್ಲಿ, ಈ ಪ್ರದೇಶದಲ್ಲಿ ಮತ್ತು ವಿಶ್ವದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಬೆದರಿಕೆಯೊಡ್ಡಿದೆ ಎಂದು ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಗೋಪಾಲ ಬಾಗ್ಲೆ ಅವರು ಹೇಳಿದರು.

 ಗೃಹಸಚಿವ ರಾಜನಾಥ ಸಿಂಗ್ ಅವರು ಶುಕ್ರವಾರ ಸಂಜೆ ಚೀನಾದಲ್ಲಿನ ಬೆಳವಣಿಗೆ ಗಳು ಮತ್ತು ಅಮರನಾಥ ಯಾತ್ರಿಗಳ ಮೇಲಿನ ಭಯೋತ್ಪಾದಕರ ದಾಳಿಯ ಕುರಿತು ವಿವರಗಳನ್ನು ಪ್ರತಿಪಕ್ಷ ನಾಯಕರಿಗೆ ನೀಡಲಿದ್ದಾರೆ. ಸಂಸತ್ತು ಸೋಮವಾರ ತನ್ನ ನೂತನ ಅಧಿವೇಶನವನ್ನು ಆರಂಭಿಸುವ ಮುನ್ನ ಪ್ರತಿಪಕ್ಷಗಳ ಬೆಂಬಲ ಪಡೆದುಕೊಳ್ಳುವ ಆಶಯ ಸರಕಾರದ್ದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News