ಟ್ರಂಪ್ ವಾಗ್ದಂಡನೆಗೆ ಪ್ರಥಮ ನೋಟಿಸ್
ವಾಶಿಂಗ್ಟನ್, ಜು. 13: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ವಾಗ್ದಂಡನೆಗೆ ಗುರಿಪಡಿಸಬೇಕೆಂದು ಒತ್ತಾಯಿಸುವ ಪ್ರಥಮ ನೋಟಿಸನ್ನು ಡೆಮಾಕ್ರಟಿಕ್ ಸಂಸದ ಕ್ಯಾಲಿಫೋರ್ನಿಯದ ಬ್ರಾಡ್ ಶರ್ಮನ್ ಸಲ್ಲಿಸಿದ್ದಾರೆ. ಆದರೆ, ರಿಪಬ್ಲಿಕನ್ ಪಕ್ಷದ ಪ್ರಾಬಲ್ಯದ ಕಾಂಗ್ರೆಸ್‌ನಲ್ಲಿ ಈ ನೋಟಿಸ್ ತಡೆಹಿಡಿಯಲ್ಪಡುವ ಸಾಧ್ಯತೆ ವಿಪುಲವಾಗಿದೆ.
ಅಧ್ಯಕ್ಷರನ್ನು ಅಧಿಕಾರದಿಂದ ತೆಗೆದುಹಾಕುವ ಬೆದರಿಕೆಯನ್ನು ಶರ್ಮನ್ ಒಂದು ವಾರದ ಹಿಂದೆಯೇ ಹಾಕಿದ್ದರು. ಈಗ ಆ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡು ‘ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಜಾನ್ ಟ್ರಂಪ್‌ರನ್ನು ಭಾರಿ ಅಪರಾಧಗಳು ಮತ್ತು ತಪ್ಪುಗಳಿಗಾಗಿ ದೋಷಾರೊಪಣೆಗೆ ಗುರಿಪಡಿಸುವ’ ನಾಲ್ಕು ಪುಟಗಳ ನಿರ್ಣಯವೊಂದನ್ನು ಮಂಡಿಸಿದ್ದಾರೆ.
ಕಳೆದ ವರ್ಷದ ಅಧ್ಯಕ್ಷೀಯ ಚುನಾವಣೆಯ ಅವಧಿಯಲ್ಲಿ ತನ್ನ ಪ್ರಚಾರ ತಂಡ ಮತ್ತು ರಶ್ಯ ಹೊಂದಿದೆಯೆನ್ನಲಾದ ಸಂಭಾವ್ಯ ನಂಟು ಮತ್ತು ಅವರ ಹಿರಿಯ ಸಹಾಯಕರೊಬ್ಬರ ಕುರಿತ ತನಿಖೆಯನ್ನು ರದ್ದುಪಡಿಸುವ ಟ್ರಂಪ್‌ರ ಪ್ರಯತ್ನಗಳು ನ್ಯಾಯವನ್ನು ತಡೆಹಿಡಿದಂತೆ ಆಗುತ್ತದೆ ಎಂದು ಶರ್ಮನ್ ಹೇಳಿಕೆಯೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.
‘‘ಟ್ರಂಪ್ ಪಚಾರ ತಂಡವು ರಶ್ಯದಿಂದ ನೆರವು ಪಡೆಯಲು ಉತ್ಸುಕವಾಗಿತ್ತು ಎನ್ನುವುದನ್ನು ಟ್ರಂಪ್‌ರ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್ ಇತ್ತೀಚೆಗೆ ಬಹಿರಂಗಪಡಿಸಿದ ಮಾಹಿತಿಗಳಿಂದ ಸ್ಪಷ್ಟವಾಗಿದೆ’’
‘‘ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕಲ್ ಫ್ಲಿನ್ ಕುರಿತ ತನಿಖೆ ಮತ್ತು ರಶ್ಯ ನಂಟಿನ ಕುರಿತ ತನಿಖೆಯನ್ನು ಮೊಟಕುಗೊಳಿಸಲು ಅಧ್ಯಕ್ಷರು ಪ್ರಯತ್ನಿಸುತ್ತಿದ್ದಾರೆ ಹಾಗೂ ಅವರು ಏನನ್ನೋ ಅಡಗಿಸಿಡುತ್ತಿದ್ದಾರೆ ಎನ್ನುವುದು ಇದರಿಂದ ಸ್ಪಷ್ಟವಾಗಿದೆ’’ ಎಂದು ಬ್ರಾಡ್ ಶರ್ಮನ್ ಅಭಿಪ್ರಾಯಪಟ್ಟರು.