ಶರತ್ ಮನೆಗೆ ಯಡಿಯೂರಪ್ಪ ಭೇಟಿ
ಬಂಟ್ವಾಳ, ಜು. 13: ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಮೃತಪಟ್ಟ ಶರತ್ ಮಡಿವಾಳರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಭೇಟಿ ನೀಡಿ ಶರತ್ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿರುವ ಇಬ್ಬರು ಸಚಿವರಿಗೆ ಶರತ್ ಸಾವಿನ ಕುರಿತು ಚಿಂತೆಯೇ ಇಲ್ಲ. ಅವರಿಗೆ ಕೇವಲ ಚುನಾವಣೆಯದ್ದೆ ಚಿಂತೆ. ಮುಖ್ಯಮಂತ್ರಿಯೂ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ರಾಜ್ಯದಲ್ಲಿ ಇಪ್ಪತ್ತನಾಲ್ಕು ಹಿಂದು ಕಾರ್ಯಕರ್ತರ ಕೊಲೆ ಆಗಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿಯುವ ನೈತಿಕ ಹಕ್ಕನ್ನೇ ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ನಡೆದಿರುವ ಕೊಲೆ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಿ ತನಿಖೆ ಮಾಡಿಸಬೇಕು. ಈ ಕುರಿತು ತಾನು ಕೇಂದ್ರ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದೇನೆ. ಕೋಮುಗಲಭೆ ಮಾಡುವ ಮೂಲಕ ಜಾತಿಯ ವಿಷಬೀಜ ಬಿತ್ತುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ. ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಅಗತ್ಯವಿದ್ದು, ಶರತ್ ಮಡಿವಾಳ ಹತ್ಯೆಯ ಸೂಕ್ತ ತನಿಖೆಯಾಗಬೇಕು ಎಂದು ಹೇಳಿದರು.
ಇದಕ್ಕೂ ಮುನ್ನ ಸಜೀಪ ಮುನ್ನೂರು ಶಿಶುಮಂದಿರದಲ್ಲಿ ಪ್ರಭಾಕರ ಭಟ್‌ರೊಂದಿಗೆ ಯಡಿಯೂರಪ್ಪ ರಹಸ್ಯ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಉಡುಪಿ - ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಪ್ರಭಾಕರ ಬಂಗೇರ, ಪದ್ಮನಾಭ ಕೊಟ್ಟಾರಿ, ಪಕ್ಷ ಪ್ರಮುಖರಾದ ದೇವದಾಸ ಶೆಟ್ಟಿ, ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಬ್ರಿಜೇಷ್ ಚೌಟ, ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ದಿನೇಶ್ ಅಮ್ಟೂರು, ಪ್ರಮುಖರಾದ ಮೋನಪ್ಪ ದೇವಸ್ಯ, ರಾಮದಾಸ ಬಂಟ್ವಾಳ, ಕೃಷ್ಣಪ್ಪ ಪೂಜಾರಿ , ಚೆನ್ನಪ್ಪ ಕೋಟ್ಯಾನ್ ಸಹಿತ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.