ಸಾವಿನ ಸುದ್ದಿ ಬಚ್ಚಿಟ್ಟ ಬಗ್ಗೆ ಆಸ್ಪತ್ರೆಯವರೇ ಸ್ಪಷ್ಟಪಡಿಸಲಿ: ಯು.ಟಿ. ಖಾದರ್
ಮಂಗಳೂರು, ಜು.13: ಶರತ್ ಸಾವಿನ ಸುದ್ದಿಯನ್ನು ಬಚ್ಚಿಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟ ಆಸ್ಪತ್ರೆಯ ಮುಖ್ಯಸ್ಥರೇ ಸ್ಪಷ್ಪಪಡಿಸಲಿ. ಇದರಲ್ಲಿ ನಮ್ಮದೇನೂ ಪಾತ್ರವಿಲ್ಲ ಎಂದು ಸಚಿವ ಖಾದರ್ ಹೇಳಿದ್ದಾರೆ.
ಶಾಂತಿ ಸಭೆಯ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸಿದರು.
ಆರೆಸೆಸ್ಸ್ ಕಾರ್ಯಕರ್ತ ಶರತ್ ಜು.6ರಂದು ಮಧ್ಯರಾತ್ರಿ ಕೊನೆಯುಸಿರೆಳೆದರೂ ಮುಖ್ಯಮಂತ್ರಿ ಸಿದ್ದರಾಮಯ್ಯರ ದ.ಕ.ಜಿಲ್ಲೆಯ ಭೇಟಿಯ ಹಿನ್ನಲೆಯಲ್ಲಿ ಸಾವಿನ ಸುದ್ದಿಯನ್ನು ಬಚ್ಚಿಡಲಾಗಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಸಿದ ಅವರು, ಬಿಜೆಪಿಯ ಮುಖಂಡರೊಬ್ಬರು ಈ ಆಸ್ಪತ್ರೆಯ ಆಡಳಿತ ಮಂಡಳಿಯಲ್ಲಿದ್ದಾರೆ. ವಾಸ್ತವ ಏನು ಎಂಬುದನ್ನು ಅವರೇ ತಿಳಿದುಕೊಳ್ಳಲಿ. ನಾನು ಶರತ್‌ನ ಆರೋಗ್ಯ ವಿಚಾರಿಸಲು ಹೋದಾಗ ಅಲ್ಲಿ ವೈದ್ಯರು ಮತ್ತು ನರ್ಸ್ ಮಾತ್ರ ಇದ್ದರು. ನಾನೇನು ಮಾತನಾಡಿದ್ದೇನೆ ಎಂಬುದನ್ನು ಅವರಿಂದ ಕೇಳಿ ತಿಳಿದುಕೊಳ್ಳಬಹುದು. ಈ ಬಗ್ಗೆ ಯಾರಾದರು ಲಿಖಿತ ಮನವಿ ಮಾಡಿದಲ್ಲಿ ಜಿಲ್ಲಾಡಳಿತ ತನಿಖೆ ನಡೆಸಲಿದೆ ಎಂದರು.
ಬಿಜೆಪಿಗರು ರಾಜಧರ್ಮ ಪಾಲಿಸಿಲ್ಲ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಮುಖಂಡ ಜಲೀಲ್ ಕರೋಪಾಡಿ ಹತ್ಯೆಯಾದ ಬಳಿಕ ಸಂಸದ ನಳಿನ್ ಕುಮಾರ್ ಕಟೀಲ್ ಅಲ್ಲಿಗೆ ಭೇಟಿ ನೀಡಿ ರಾಜಧರ್ಮ ಪಾಲಿಸಬಹುದಿತ್ತು. ಆದರೆ ಹಾಗೇ ಮಾಡದೆ ವಿನಾ ಕಾರಣ ಆರೋಪ ಮಾಡುವುದು ಸರಿಯಲ್ಲ ಎಂದು ಸಚಿವ ರೈ ಹೇಳಿದರು.
ಈಗಾಗಲೆ ಹಿರಿಯ ಪೊಲೀಸ್ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಿದ್ದು, ತನಿಖೆಗೆ ಮಾಗದರ್ಶನ ನೀಡುತ್ತಿದ್ದಾರೆ. ಶರತ್ ಹತ್ಯೆಗೆ ಸಂಬಂಧಿಸಿದಂತೆ ಸುಳಿವು ಸಿಕ್ಕಿದ್ದು, ಶೀಘ್ರ ಆರೋಪಿಗಳ ವಿವರ ಬಹಿರಂಗಗೊಳ್ಳಲಿದೆ ಎಂದು ಸಚಿವ ರೈ ಹೇಳಿದರು.