ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ಪ್ರಧಾನಿಗೆ ಮನವಿ
ಉಡುಪಿ, ಜು.13: ಮಹಿಳೆಯರಿಗೆ ಮೂಲಭೂತವಾಗಿ ಅವಶ್ಯಕವಾಗಿರುವ ಸ್ಯಾನಿಟರಿ ನ್ಯಾಪ್‌ಕಿನ್ (ಪ್ಯಾಡ್)ಗಳ ಮೇಲೆ ಜಿಎಸ್‌ಟಿ ತೆರಿಗೆ ವಿಧಿಸಿದ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಇಂದು ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿತು.
ಮಹಿಳೆಯರು ತಮ್ಮ ಋತುಸ್ರಾವದ ಸಮಯದಲ್ಲಿ ಉಪಯೋಗಿಸುವ ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ಇತ್ತೀಚೆಗೆ ನೂತನವಾಗಿ ಜಾರಿಗೆ ತಂದ ಜಿಎಸ್‌ಟಿ ತೆರಿಗೆ ಪದ್ಧತಿ ಅಡಿ ಶೇ.12ರಷ್ಟು ತೆರಿಗೆ ವಿಧಿಸಿರುವುದು ಖಂಡನೀಯ ಹಾಗೂ ಆಕ್ಷೇಪಾರ್ಹ. ಇದನ್ನು ಕೇವಲ ಒಂದು ವಸ್ತುವಾಗಿ (ಪ್ರಾಡಕ್ಟ್) ಆಗಿ ನೋಡದೇ ಹೆಣ್ಮಕ್ಕಳ ಅನಿವಾರ್ಯತೆಯಾಗಿ ಪರಿಗಣಿಸಬೇಕಾಗಿತ್ತು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಹೆಣ್ಣುಮಕ್ಕಳಿಗಾಗಿ ತಾವು ಪ್ರಾರಂಭಿಸಿದ ‘ಭೇಟಿ ಬಚಾವೊ-ಭೇಟಿ ಪಡಾವೋ’ ಆಂದೋಲನ ಹಾಗೂ ಸ್ವಚ್ಛ ಭಾರತ್ ಕಲ್ಪನೆಯ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಐಷಾರಾಮಿ ವಸ್ತುವೆಂದು ಪರಿಗಣಿಸದೇ, ಅತೀ ಅವಶ್ಯಕ ವಸ್ತುವಾಗಿ ಪರಿಗಣಿಸಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ.
ಬಳೆಗಳು, ಬಿಂದಿ, ಗರ್ಭನಿರೋಧಕ ಮಾತ್ರೆಗಳ ಮೇಲೆ ಶೇ.0 ಜಿಎಸ್‌ಟಿ ತೆರಿಗೆ ವಿಧಿಸಿದ್ದು, ಸ್ಯಾನಿಟರಿ ಪ್ಯಾಡ್‌ಗಳನ್ನು ಈ ಸಾಲಿಗೆ ಸೇರಿಸದಿರುವುದು ಪ್ರಶ್ನಾರ್ಹವೆನಿಸಿದೆ. ಈಗಲಾದರೂ ಇದರ ಗಂಭೀರತೆಯನ್ನು ಅರಿತು ಇದನ್ನು ತೆರಿಗೆ ಮುಕ್ತಗೊಳಿಸಿ ದೇಶದಲ್ಲಿ ಶೇ.50ರಷ್ಟಿರುವ ಮಹಿಳೆಯರ ಮಾನಸಿಕ ಭಾವನೆಗಳಿಗೆ ಸ್ಪಂಧಿಸುವಂತೆ ಕಳಕಳಿಯ ಮನವಿ ಮಾಡಿಕೊಳ್ಳಲಾಗಿದೆ.
ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದ ನಿಯೋಗದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವರೋನಿಕಾ ಕರ್ನೇಲಿಯೊ, ನಾಯಕಿಯರಾದ ಸರಳಾ ಕಾಂಚನ್, ಡಾ.ಸುನೀತಾ ಶೆಟ್ಟಿ, ರೋಶನಿ ಒಲಿವೆರಾ, ಜ್ಯೋತಿ ಹೆಬ್ಬಾರ್, ಚಂದ್ರಿಕಾ ಶೆಟ್ಟಿ, ರಮಾ ದೇವಿ, ಪ್ರಮೀಳಾ ಜತ್ತನ್ನ, ಮೇರಿ ಡಿಸೋಜ, ಸುಮಂತ್ ಆಳ್ವ ಉಪಸ್ಥಿತರಿದ್ದರು.