×
Ad

‘ಉಡುಪಿಗೆ 1769 ಕೋಟಿ ರೂ.ಅನುದಾನ ತಂದ ಸಚಿವರು’

Update: 2017-07-13 22:44 IST

ಉಡುಪಿ, ಜು.13: ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ತನ್ನ ಉಡುಪಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 1,769 ಕೋಟಿ ರೂ.ಅನುದಾನವನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅದ್ಯಕ್ಷ ಅಮೃತ ಶೆಣೈ ಹೇಳಿದ್ದಾರೆ.

ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಚುನಾವಣೆಯಲ್ಲಿ ದಾಖಲೆಯ 39,524 ಮತಗಳ ಅಂತರದಿಂದ ಜಯಗಳಿಸಿರುವ ಪ್ರಮೋದ್ ಅವರು ಈವರೆಗೆ 1769 ಕೋಟಿ ರೂ.ಅನುದಾನವನ್ನು ತಂದು ಉಡುಪಿಯನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ ಎಂದರು.

ಈ ನಾಲ್ಕು ವರ್ಷಗಳಲ್ಲಿ ಪ್ರಮೋದ್ ಅವರ ಸಾಧನೆಗಳ ಪಟ್ಟಿ ಮಾಡಿದ ಶೆಣೈ, ಮಲ್ಪೆ-ಪಡುಕೆರೆ ಸೇತುವೆಗೆ 16.91 ಕೋಟಿ ರೂ., ಉಡುಪಿ ಕ್ಷೇತ್ರಕ್ಕೆ ನಿರಂತರ 24 ಗಂಟೆಗಳ ವಿದ್ಯುತ್, ಉಡುಪಿ ಬೀಡಿನಗುಡ್ಡೆ ಬಯಲು ರಂಗಮಂದಿರ, ಬ್ರಹ್ಮಾವರದ ಕೃಷಿ ಕೇಂದ್ರದ ಬಳಿ ಕೃಷಿ ಡಿಪ್ಲೋಮಾ ಕಾಲೇಜಿಗೆ 4 ಕೋಟಿ ರೂ., ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ನರ್ಮ್ ಬಸ್‌ಗಳನ್ನು ತಂದಿದ್ದಾರೆ ಎಂದರು.
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಹೈಟೆಕ್ ಮಹಿಳಾ ಮೀನು ಮಾರುಕಟ್ಟೆ, ಮೀನುಗಾರರಿಗೆ ಸಂಕಷ್ಟಯ ಪರಿಹಾರ ನಿಧಿಯನ್ನು 2 ಲಕ್ಷರೂ.ನಿಂದ 5ಲಕ್ಷರೂ.ಗಳಿಗೆ ಏರಿಸಿರುವುದು, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ಮಲ್ಪೆಯಲ್ಲೇ ಪ್ರಾರಂಭಿಸಿ ಜಿಲ್ಲೆಯ ಮೀನುಗಾರರಿಗೆ ಅನುಕೂಲ ಮಾಡಿರುವುದು, ಮಹಿಳೆಯರು, ಮಕ್ಕಳು, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೆ ಒಟ್ಟು 20.47 ಕೋಟಿ ರೂ.ವಿನಿಯೋಗ ಇವರ ಸಾಧನೆಗಳಲ್ಲಿ ಸೇರಿವೆ ಎಂದರು.

ಕ್ರೀಡೆಗಾಗಿ ಅಜ್ಜರಕಾಡಿನಲ್ಲಿ ಈಜುಕೊಳ, ಜಿಲ್ಲಾ ಕ್ರೀಡಾಂಗಣ, ಸಿಂಥೆಟಿಕ್ ಟ್ರಾಕ್, ಸಿಂಥೆಟಿಕ್ ಟೆನಿಸ್ ಕೋರ್ಟ್ ನಿರ್ಮಾಣ, ಶೆಟ್ಲ್ ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್ ಅಂಕಣ, ಮಣಿಪಾಲ ಮಣ್ಣಂಪಳ್ಳದ ಅಭಿವೃದ್ಧಿ, ಬಡವರ ನೆಮ್ಮದಿಯ ಸೂರಿಗೆ 24.71 ಕೋಟಿ, ಸ್ವಉದ್ಯೋಗ ಹಾಗೂ ಕೈಗಾರಿಕೆಗೆ 49.87 ಕೋಟಿರೂ., ಆರೋಗ್ಯ ಸೌಲಭ್ಯಕ್ಕೆ 17.07 ಕೋಟಿರೂ.ಗಳನ್ನು ವಿನಿಯೋಗಿಸಲಾಗಿದೆ ಎಂದರು.

ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 8 ಕೋಟಿ ರೂ., ಮೀನುಗಾರಿಕಾ ಅಭಿವೃದ್ಧಿಗೆ 284.71 ಕೋಟಿರೂ., ರಾಜ್ಯ ಹೆದ್ದಾರಿ ಅಭಿವೃದ್ಧಿ 9 ಕೋಟಿ ರೂ. ವಿನಿಯೋಗಿಸಿದ್ದಲ್ಲದೇ ಬ್ರಹ್ಮಾವರವನ್ನು ತಾಲೂಕಾಗಿ ಘೋಷಣೆಯನ್ನೂ ಮಾಡಲಾಗಿದೆ ಎಂದವರು ವಿವರಿಸಿದರು.
ಕ್ಷೇತ್ರದ ಜನತೆ ವಿರೋಧ ಪಕ್ಷಗಳ ಅಪಪ್ರಚಾರಗಳಿಗೆ ಕಿವಿಗೊಡದೇ ಸಚಿವರ ಸಾಧನೆ ಹಾಗೂ ಸಿದ್ಧರಾಮಯ್ಯ ನೇತೃತ್ವದ ಸರಕಾರದ ಜನಪರ ಯೋಜನೆಗಳನ್ನು ಅರಿತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ನಿರಂತರ ಚಟುವಟಿಕೆ ನಡೆಸುವುದೇ ಪ್ರಚಾರ ಸಮಿತಿಯ ಉದ್ದೇಶವಾಗಿದೆ. ಇದಕ್ಕಾಗಿ ಐಟಿ ಸೆಲ್ ತೆರೆದು, ಫೇಸ್‌ಬುಕ್ ಹಾಗೂ ಇತರ ಸಾಮಾಜಿಕ ಜಾಲತಾಣಗಳ ಮೂಲಕ ಜನರೊಂದಿಗೆ ನಿರಂತರವಾಗಿ ಸಂಪರ್ಕ ಇರಿಸಿಕೊಳ್ಳಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಚಾರ ಸಮಿತಿಯ ಅಣ್ಣಯ್ಯ ಶೇರಿಗಾರ್, ಡಾ.ಸುನೀತಾ ಶೆಟ್ಟಿ, ನಿತ್ಯಾನಂದ ಕೆಮ್ಮಣ್ಣು, ಪ್ರಭಾಕರ ನಾಯಕ್ ಅಮ್ಮುಂಜೆ, ರವಿರಾಜ್ ಹೆಗ್ಡೆ, ಜೋಯೆಲ್ ಸೋನ್ಸ್, ವಿಜಯ ಡಿಸೋಜ, ಸಂಜಯ್, ನೀರಜ್ ಪಾಟೀಲ್, ಯಜ್ಞೇಶ್ ಆಚಾರ್ಯ ಉಪಸ್ಥಿತರಿದ್ದರು.
   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News