×
Ad

ಹೊಸ ಈಜು ಕೊಳ ನಿರ್ಮಾಣಕ್ಕೆ ಚಿಂತನೆ: ಮೇಯರ್‌

Update: 2017-07-13 23:07 IST

ಮಂಗಳೂರು, ಜು.13: ನಗರದ ಲೇಡಿಹಿಲ್ ಸಮೀಪದ ಹ್ಯಾಟ್‌ಹಿಲ್‌ನ ಮಹಿಳಾ ವನದಲ್ಲಿ ಮಹಿಳೆಯರಿಗೆ ಹಾಗೂ ಕ್ರೀಡಾಪಟುಗಳಿಗೆ ಪೂರಕವಾಗುವ ಸುಸಜ್ಜಿತ ಹೊಸ ಈಜುಕೊಳವನ್ನು ಪ್ರಾರಂಭಿಸುವ ಚಿಂತನೆ ಇದೆ ಎಂದು ಮಂಗಳೂರು ಮೇಯರ್ ಕವಿತಾ ಸನಿಲ್ ಹೇಳಿದರು.

ಪೂನಾದಲ್ಲಿ ನಡೆದ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ರಾಷ್ಟ್ರೀಯ ದಾಖಲೆ ಮಾಡಿರುವ ಮಂಗಳಾ ಈಜು ಕ್ಲಬ್‌ನ ಎಸ್.ಆರ್. ರಚನಾ ರಾವ್ ಅವರಿಗೆ ನಗರದ ಕಾರ್ಪೊರೇಷನ್ ಈಜುಕೊಳದ ಸಭಾಂಗಣದಲ್ಲಿ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ರಚನಾ ರಾವ್ ಅವರು ಒಂದು ಚಿನ್ನ, ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳನ್ನು ಗಳಿಸಿದ್ದು, ಇನ್ನಷ್ಟು ಬಾಲಕಿಯರು ಸಾಧನೆ ಮಾಡಿದಾಗ ಮಹಿಳಾ ಕ್ರೀಡಾಪಟುವಾಗಿರುವ ನನಗೆ ತುಂಬಾ ಹೆಮ್ಮೆ ಎನಿಸುತ್ತದೆ ಎಂದರು.

ಪಾಲಿಕೆಯ ಮುಖ್ಯ ಸಚೇತಕ ಶಶಿಧರ್ ಹೆಗ್ಡೆಯವರು, ಮಕ್ಕಳ ಪ್ರತಿಭೆಗಳನ್ನು ಹೆತ್ತವರು ಪ್ರೋತ್ಸಾಹಿಸಬೇಕು ಎಂದರು. ಶ್ರೀ ರಾಮಕಷ್ಣ ವಿದ್ಯಾಸಂಸ್ಥೆಯ ಸಂಚಾಲಕ ಕೃಷ್ಣಪ್ರಸಾದ್ ರೈ, ಯುವ ಸಬಲೀಕರಣ ಜಿಲ್ಲಾ ಯುವಜನ ಕ್ರೀಡಾಧಿಕಾರಿ ಪ್ರದೀಪ್ ಡಿಸೋಜಾ ಉಪಸ್ಥಿತರಿದ್ದರು.

ಈ ಸಂದರ್ಭ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ ಮಂಗಳಾ ಕ್ಲಬ್‌ನ ಸಾನ್ಯಾ ಡಿ. ಶೆಟ್ಟಿ, ಆರಾಧನಾ ಬೇಕಲ್ ಹಾಗೂ ರಾಜ್ಯ ಮಟ್ಟದಲ್ಲಿ ಪದಕ ವಿಜೇತ ಸ್ಮತಿ ಹಾಗೂ ರಾಷ್ಟ್ರಮಟ್ಟದ ಈಜುಸ್ಪರ್ಧೆಯಲ್ಲಿ ಭಾಗವಹಿಸಿದ ಜೈಹಿಂದ್ ಈಜು ಕ್ಲಬ್‌ನ ಆಲಿಸ್ಟರ್ ರೇಗೊ ಇವರನ್ನು ಮಂಗಳ ಈಜು ಕ್ಲಬ್‌ನ ವತಿಯಿಂದ ಸನ್ಮಾನಿಸಲಾಯಿತು.

ಕ್ಲಬ್‌ನ ಅಧ್ಯಕ್ಷ ಪ್ರಮುಖ್ ರೈ ಸ್ವಾಗತಿಸಿದರು. ಮುಖ್ಯ ಈಜು ತರಬೇತುದಾರರಾದ ಲೋಕರಾಜ್ ವಿಟ್ಲ , ಕ್ಲಬ್‌ನ ಕಾರ್ಯದರ್ಶಿ ಶಿವಾನಂದ ಗಟ್ಟಿ, ಕ್ರೀಡಾಧಿಕಾರಿ ಲಿಲ್ಲಿ ಪಾಯಸ್, ಈಜುಕೊಳದ ವ್ಯವಸ್ಥಾಪಕ ರಮೇಶ್ ಕುಮಾರ್ ಉಪಸ್ಥಿತರಿದ್ದರು. ಸಚಿತಾ ನಂದಗೋಪಾಲ ಕಾರ್ಯಕ್ರಮ ನಿರೂಪಿಸಿದರು. ರಾಧೇಶ್ ಶೆಣೈ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News