×
Ad

ಜು. 22 ರಂದು ಮಂಗಳೂರಲ್ಲಿ ಶಾಂತಿಯಾತ್ರೆ

Update: 2017-07-14 18:32 IST

ಮಂಗಳೂರು, ಜು.14: ರಾಜಕೀಯ ಪ್ರೇರಿತ ಗಲಭೆಗೆ ತುತ್ತಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಮರುಸ್ಥಾಪನೆ ಉದ್ದೇಶದಿಂದ ವಿವಿಧ ರಾಜಕೀಯ ಪಕ್ಷ, ಸಂಘಟನೆಗಳ ಸಹಭಾಗಿತ್ವದಲ್ಲಿ ನಗರದಲ್ಲಿ ಜು. 22 ರಂದು ಶಾಂತಿಯಾತ್ರೆ ಆಯೋಜಿಸಲಾಗಿದೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾ ಅಧ್ಯಕ್ಷ ಮಹಮ್ಮದ್‌ಕುಂಞಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗಲಭೆಗೆ ಕಾರಣವಾಗಿರುವ ಕಾಂಗ್ರೆಸ್, ಬಿಜೆಪಿ, ಎಸ್‌ಡಿಪಿಐ, ಪಿಎಫ್‌ಐ ಹೊರತುಪಡಿಸಿ ಇತರ ರಾಜಕೀಯ ಪಕ್ಷಗಳ ಮುಖಂಡರು, ಸರ್ವಧರ್ಮ ಧಾರ್ಮಿಕ ಮುಖಂಡರು, ಕಾಲೇಜು ವಿದ್ಯಾರ್ಥಿಗಳು, ಸಂಘಸಂಸ್ಥೆ ಪ್ರತಿನಿಧಿಗಳು ಈ ರಾಜಕೀಯ ರಹಿತ ಶಾಂತಿಯಾತ್ರೆಯಲ್ಲಿ ಪಾಲ್ಗೊಳ್ಳುವರು ಎಂದು ಅವರು ಹೇಳಿದರು.

ದೇವೇಗೌಡ, ಎಚ್ಡಿಕೆ, ಕಾರಟ್:

ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಿಪಿಐಎಂ ರಾಷ್ಟ್ರೀಯ ಮುಖಂಡ ಪ್ರಕಾಶ್ ಕಾರಟ್, ಹೊರ ಜಿಲ್ಲೆಗಳ ಶಾಸಕರು ಶಾಂತಿಯಾತ್ರೆಯಲ್ಲಿ ಭಾಗವಹಿಸುವರು.

ನಗರದ ಬಾವುಟಗುಡ್ಡೆಯಿಂದ ಆರಂಭಗೊಳ್ಳುವ ಶಾಂತಿಯಾತ್ರೆ ಜಿಲ್ಲಾಧಿಕಾರಿ ಕಚೇರಿ ತನಕ ತೆರಳಿ ಪುರಭವನ ಸಮೀಪ ಸಂಪನ್ನಗೊಳ್ಳಲಿದೆ. ಬಳಿಕ ಸಭೆ ನಡೆಯುವುದು ಎಂದವರು ವಿವರಿಸಿದರು.

ಜು. 14 ರಂದು ಜಿಲ್ಲೆಯಲ್ಲಿ ಶಾಂತಿಯಾತ್ರೆ ನಡೆಸಲು ಅನುಮತಿ ನಿರಾಕರಿಸಿದ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿದ ಅವರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಕಾರಾತ್ಮಕವಾಗಿ ಸ್ಪಂದಿಸಿದರೂ ಸಚಿವರಾದ ರಮಾನಾಥ ರೈ ಹಾಗೂ ಯು.ಟಿ.ಖಾದರ್ ಕುಮ್ಮಕ್ಕಿನಿಂದ ಕಾರ್ಯಕ್ರಮಕ್ಕೆ ಅವಕಾಶ ದೊರೆಯಲಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕರಾವಳಿಯಲ್ಲಿ ಗರಿಷ್ಠ ಸಂಖ್ಯೆಯ ಕೋಮುಗಲಭೆಗಳು ಸಂಭವಿಸುತ್ತಿವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದ ಅವಧಿಯಲ್ಲಿ ಕೂಡ ಇಷ್ಟು ಮತೀಯ ಗಲಭೆಗಳು ನಡೆದಿಲ್ಲ ಎಂದವರು ಹೇಳಿದರು.

ಬೆಂಕಿ ಹಚ್ಚುವ ಮಾತು ಸರಿಯಲ್ಲ:

ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಬಂಧಿಸಿದರೆ ರಾಜ್ಯದಲ್ಲಿ ಬೆಂಕಿ ಬೀಳುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್‌ಯಡಿಯೂರಪ್ಪ ಹೇಳಿರುವುದು ದುರದೃಷ್ಟಕರ. ಓರ್ವ ಮಾಜಿ ಮುಖ್ಯಮಂತ್ರಿಯ ಬಾಯಲ್ಲಿ ಇಂತಹ ಮಾತು ಬರಬಾರದಿತ್ತು . ಬಿಜೆಪಿ ರಾಜ್ಯ ಅಧ್ಯಕ್ಷರು ರಾಜ್ಯದಲ್ಲಿ ಬೆಂಕಿ ಹಾಕುವ ಬಗ್ಗೆ ಮಾತನಾಡುತ್ತಾರೆ. ಸಂಸದರು ಜಿಲ್ಲೆಯಲ್ಲಿ ಬೆಂಕಿ ಹಾಕುವ ಬಗ್ಗೆ ಮಾತನಾಡುತ್ತಾರೆ ಎಂದು ಆಕ್ಷೇಪಿಸಿದರು.

ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ರಾಂಗಣೇಶ್, ಮುಖಂಡರಾದ ಅಕ್ಷಿತ್‌ಸುವರ್ಣ, ಶ್ರೀನಾಥ್ ರೈ, ರಾಮಕೃಷ್ಣ ಶೆಟ್ಟಿ, ರಮೀಜಾಬಾನು, ನಝೀರ್, ವಸಂತ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News