×
Ad

ಡಾರ್ಜಿಲಿಂಗ್ ನಲ್ಲಿ ತೀವ್ರಗೊಂಡ ಮುಷ್ಕರ: ಆರ್‌ಪಿಎಫ್ ಕಚೇರಿ, ಪೊಲೀಸ್ ಹೊರಠಾಣೆಗೆ ಬೆಂಕಿ

Update: 2017-07-14 19:00 IST

ಡಾರ್ಜಿಲಿಂಗ್, ಜು.14: ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿ ಡಾರ್ಜಿಲಿಂಗ್ನಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ 30ನೇ ದಿನಕ್ಕೆ ಕಾಲಿರಿಸಿದ್ದು ಶುಕ್ರವಾರ ರೈಲ್ವೇ ಸುರಕ್ಷಾ ಪಡೆ(ಆರ್‌ಪಿಎಫ್) ಕಚೇರಿ, ಪೊಲೀಸ್ ಹೊರಠಾಣೆ ಹಾಗೂ ಸರಕಾರಿ ಲೈಬ್ರೆರಿಯೊಂದಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುರ್‌ಸಿಯೊಂಗ್‌ನಲ್ಲಿರುವ ಆರ್‌ಪಿಎಫ್ ಕಚೇರಿ ಮತ್ತು ಸುಖಿಯಪೊಖ್ರಿ ಎಂಬಲ್ಲಿರುವ ಪೊಲೀಸ್ ಹೊರಠಾಣೆಗೆ ಶುಕ್ರವಾರ ಬೆಳಗ್ಗಿನ ಜಾವ ಬೆಂಕಿ ಹಚ್ಚಲಾಗಿದೆ. ಅಲ್ಲದೆ ಮಿರಿಕ್ ಉಪವಿಭಾಗದಲ್ಲಿರುವ ಸರಕಾರಿ ವಾಚನಾಲಯಕ್ಕೆ ಗುರುವಾರ ರಾತ್ರಿ ಗೂರ್ಖಾಲ್ಯಾಂಡ್ ಬೆಂಬಲಿಗರು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಶಾಂತಿ ಹೆಚ್ಚುತ್ತಿರುವಂತೆಯೇ ಅಂತರ್‌ಜಾಲ ಸೇವೆಯನ್ನು ಸತತ 27ನೇ ದಿನವೂ ಸ್ಥಗಿತಗೊಳಿಸಲಾಗಿದ್ದು ಡಾರ್ಜಿಲಿಂಗ್, ಕಲೀಮ್‌ಪೊಂಗ್ ಮತ್ತು ಸೊನಡ ಪ್ರದೇಶದಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ.

ಈ ಮಧ್ಯೆ, ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಜುಲೈ 15ರಿಂದ ನಡೆಸಲು ಉದ್ದೇಶಿಸಿದ್ದ ‘ಸಾಯುವವರೆಗೆ ಉಪವಾಸ ’ ಕಾರ್ಯಕ್ರಮವನ್ನು ಮುಂದೂಡಿರುವುದಾಗಿ ಗೂರ್ಖಾಲ್ಯಾಂಡ್ ಚಳವಳಿ ಸಮನ್ವಯ ಸಮಿತಿ(ಜಿಎಂಸಿಸಿ) ತಿಳಿಸಿದೆ. ಜುಲೈ 18ರಂದು ನಡೆಯಲಿರುವ ಸರ್ವಪಕ್ಷಗಳ ಸಭೆಯಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಎಂಸಿಸಿ ಸದಸ್ಯರು ತಿಳಿಸಿದ್ದಾರೆ. 30 ಸದಸ್ಯರುಳ್ಳ ಜಿಎಂಸಿಸಿಯಲ್ಲಿ ಜಿಜೆಎಂ, ಜಿಎನ್‌ಎಲ್‌ಎಫ್ ಮತ್ತು ಜೆಎಪಿ ಪಕ್ಷಗಳ ಪ್ರತಿನಿಧಿಗಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News