×
Ad

ತಾರಾಪುಂಜಗಳ ಮಹಾಸಮೂಹ ‘ಸರಸ್ವತಿ’ ಪತ್ತೆ ಹಚ್ಚಿದ ಭಾರತೀಯ ವಿಜ್ಞಾನಿಗಳು

Update: 2017-07-14 19:35 IST

ಪುಣೆ,ಜು.14: ಬ್ರಹ್ಮಾಂಡದಲ್ಲಿ ತಾರಾಪುಂಜಗಳ ಮಹಾಸಮೂಹವೊಂದನ್ನು ಪತ್ತೆ ಹಚ್ಚಿರುವುದಾಗಿ ಪುಣೆಯ ವಿಜ್ಞಾನಿಗಳ ತಂಡವೊಂದು ಪ್ರಕಟಿಸಿದ್ದು, ಅದನ್ನು ‘ಸರಸ್ವತಿ’ ಎಂದು ಹೆಸರಿಸಿದೆ.

ಮೀನ ರಾಶಿಯ ದಿಕ್ಕಿನಲ್ಲಿ 400 ಶತಕೋಟಿ ಜೋತಿರ್ವರ್ಷಗಳ ದೂರದಲ್ಲಿರುವ ಈ ತಾರಾಪುಂಜಗಳ ಮಹಾಸಮೂಹದ ಬೆಳಕು ಈಗಷ್ಟೇ ಭೂಮಿಯನ್ನು ತಲುಪಿದ್ದು, ಅದು ಹಿಂದೆ ಹೇಗಿತ್ತು ಎಂಬ ಬಗ್ಗೆ ಅಧ್ಯಯನ ನಡೆಸಲು ಸಾಧ್ಯವಾಗಲಿದೆ ಎಂದು ಈ ವಿಜ್ಞಾನಿಗಳು ತಿಳಿಸಿದ್ದಾರೆ.
ಇದು ಬ್ರಹ್ಮಾಂಡದಲ್ಲಿಯ ತಾರಾಪುಂಜಗಳ ಮಹಾಸಮೂಹವಾಗಿದ್ದು, ಅತ್ಯಂತ ಅಪರೂಪದ್ದಾಗಿದೆ. ಈವರೆಗೆ ಇಂತಹ ಕೆಲವೇ ರಚನೆಗಳು ನಿರೀಕ್ಷಣೆಗೆ ಲಭಿಸಿದ್ದು, ಎಲ್ಲ ಸಂಶೋಧಕರು ಭಾರತದವರೇ ಆಗಿರುವುದರಿಂದ ಇದು ಖಂಡಿತವಾಗಿಯೂ ಭಾರತದ ಮೊದಲ ಶೋಧವಾಗಿದೆ ಎಂದು ಸಂಶೋಧನಾ ವರದಿಯ ಸಹಲೇಖಕರಾಗಿರುವ ಇಲ್ಲಿಯ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ(ಐಐಎಸ್‌ಇಆರ್) ಯ ಶಿಶಿರ್ ಸಾಂಖ್ಯಾಯನ ಅವರು ಹೇಳಿದರು.

ಈಗ ಪುಣೆಯ ಖಗೋಳ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರ ಅಂತರ್ ವಿವಿ ಕೇಂದ್ರ (ಐಯುಸಿಎಎ)ದ ನಿರ್ದೇಶಕರಾಗಿರುವ ಸೋಮಕ್ ರಾಯ್‌ಚೌಧುರಿ ಅವರು 1989ರಲ್ಲಿ ಬ್ರಿಟನ್ನಿನ ಕ್ಯಾಂಬ್ರಿಡ್ಜ್ ವಿವಿಯಲ್ಲಿ ಪಿಎಚ್‌ಡಿ ಅಧ್ಯಯನ ನಡೆಸುತ್ತಿದ್ದಾಗ ಇಂತಹ ತಾರಾಪುಂಜಗಳ ಮಹಾಸಮೂಹವೊಂದನ್ನು ಪತ್ತೆ ಹಚ್ಚಿದ್ದರು ಎಂದು ತಿಳಿಸಿದ ಸಾಂಖ್ಯಾಯನ, ಕ್ಷೀರಪಥ ಅಥವಾ ಆಕಾಶಗಂಗೆ ತಾರಾಪುಂಜಕ್ಕೆ ಸೇರಿರುವ ಭೂಮಿಯು ವಾಸ್ತವದಲ್ಲಿ ಲನಿಯಕಾ ಮಹಾಸಮೂಹದ ಭಾಗವೂ ಆಗಿದೆ ಎಂದರು.

ಈಗ ಪತ್ತೆಯಾಗಿರುವ ತಾರಾಪುಂಜಗಳ ಮಹಾಸಮೂಹವು ಭೂಮಿಯಿಂದ ತುಂಬ ದೂರದಲ್ಲಿದೆ ಮತ್ತು ಅಲ್ಲಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು ಅತಿಯಾದ ಸಮಯವನ್ನು ತೆಗೆದುಕೊಂಡಿದೆ. ಹೀಗಾಗಿ ಈಗ ವಿಜ್ಞಾನಿಗಳು ಅಂದಿನ ತಾರಾಪುಂಜ ವನ್ನು ನೋಡುತ್ತಿದ್ದಾರೆ. ಇದು ಬ್ರಹ್ಮಾಂಡವು ಕೋಟ್ಯಂತರ ವರ್ಷಗಳ ಹಿಂದೆ ಹೇಗೆ ಇತ್ತು ಎನ್ನುವುದನ್ನು ತಿಳಿದುಕೊಳ್ಳಲು ನಮಗೆ ನೆರವಾಗಲಿದೆ. ಬ್ರಹ್ಮಾಂಡದ ವಿಸ್ತರಣೆಯ ಹಿಂದೆ ಡಾರ್ಕ್ ಎನರ್ಜಿ ಅಥವಾ ಕಪ್ಪು ಶಕ್ತಿ ಇದೆ ಎನ್ನುವುದು ಎಲ್ಲರಿಗೂ ಗೊತ್ತು, ಆದರೆ ವಾಸ್ತವದಲ್ಲಿ ಯಾರೂ ಅದನ್ನು ಪತ್ತೆ ಹಚ್ಚಿಲ್ಲ. ಆದರೆ ಆ ಬಗ್ಗೆ ಎಲ್ಲರೂ ಅಧ್ಯಯನ ನಡೆಸುತ್ತಿದ್ದಾರೆ. ಸರಸ್ವತಿಯ ಶೋಧವು ಈ ಕಪ್ಪು ಶಕ್ತಿಯನ್ನು ಮತ್ತು ಬ್ರಹ್ಮಾಂಡದ ವಿಸ್ತರಣೆಯಲ್ಲಿ ಅದರ ಪಾತ್ರವನ್ನು ತಿಳಿದುಕೊಳ್ಳಲು ನಮಗೆ ನೆರವಾಗಲಿದೆ ಎಂದು ಸಾಂಖ್ಯಾಯನ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News