ಎನ್ನಾರೈಗಳಿಂದ ಮತದಾನ: ಕೇಂದ್ರದ ನಿಲುವು ಕೇಳಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ,ಜು.14: ಅನಿವಾಸಿ ಭಾರತೀಯರು (ಎನ್ನಾರೈ) ಇಲ್ಲಿ ಚುನಾವಣೆಗಳಲ್ಲಿ ಮತದಾನ ಮಾಡುವುದನ್ನು ಸಾಧ್ಯವಾಗಿಸಲು ಚುನಾವಣಾ ಕಾನೂನು ಆಥವಾ ನಿಯಮಗಳಲ್ಲಿ ತಿದ್ದುಪಡಿ ಮಾಡುವ ಉದ್ದೇಶವಿದೆಯೇ ಎನ್ನುವುದನ್ನು ತನಗೆ ಒಂದು ವಾರದೊಳಗೆ ತಿಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಕೇಂದ್ರಕ್ಕೆ ಸೂಚಿಸಿದೆ.
ಈ ಪ್ರಸ್ತಾವವನ್ನು ಕೇಂದ್ರ ಮತ್ತು ಚುನಾವಣಾ ಆಯೋಗ ತಾತ್ವಿಕವಾಗಿ ಒಪ್ಪಿಕೊಂಡಿವೆ ಮತ್ತು ಅದನ್ನು ಜಾರಿಗೊಳಿಸಲು ಸೂಕ್ತ ಮಾರ್ಗೋಪಾಯ ಏಕೈಕ ಪ್ರಶ್ನೆಯಾಗಿದೆ ಎಂಬ ಹೇಳಿಕೆಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಪೀಠವು ಪರಿಗಣನೆಗೆ ತೆಗೆದುಕೊಂಡಿತು.
ಜನತಾ ಪ್ರಾತಿನಿಧ್ಯ ಕಾಯ್ದೆ,1950ನ್ನು ಬದಲಿಸುವ ಅಥವಾ ಈ ಕಾಯ್ದೆಯಡಿ ರೂಪಿಸಲಾಗಿರುವ ನಿಯಮಗಳಿಗೆ ತಿದ್ದುಪಡಿಯನ್ನು ತರುವ ಮೂಲಕ ಎನ್ನಾರೈಗಳು ಅಂಚೆ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಬಹುದಾಗಿದೆ ಎಂಬ ಹೇಳಿಕೆಯನ್ನೂ ನ್ಯಾಯಲಯವು ಗಣನೆಗೆ ತೆಗೆದುಕೊಂಡಿತು.
ನ್ಯಾಯಾಲಯವು ಎನ್ನಾರೈಗಳಿಗೆ ಅಂಚೆ ಮೂಲಕ ಮತದಾನ ಮಾಡಲು ಅವಕಾಶ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಸಲ್ಲಿಸಲಾಗಿರುವ ಅರ್ಜಿಗಳ ಗೊಂಚಲಿನ ವಿಚಾರಣೆಯನ್ನು ನಡೆಸುತ್ತಿದೆ.