ಪೊಲೀಸ್ ಫೋನ್‌ಇನ್ ಕಾರ್ಯಕ್ರಮದಲ್ಲಿ ಕ್ರಮಕ್ಕೆ ಒತ್ತಾಯ

Update: 2017-07-14 14:47 GMT

ಮಂಗಳೂರು, ಜು.14: ಶಾಲಾ-ಕಾಲೇಜುಗಳ ಬಳಿ ಟ್ರಾಫಿಕ್ ಬ್ಲಾಕ್ ಆಗುತ್ತಿರುವುದಲ್ಲದೆ, ಶಾಲಾ ವಾಹನಗಳು ರಸ್ತೆ ಬದಿಯಲ್ಲೇ ಪಾರ್ಕಿಂಗ್ ಮಾಡುತ್ತಿರುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂಬ ಒತ್ತಾಯ ಪೊಲೀಸ್ ಫೋನ್ ಇನ್ ಕಾರ್ಯ್ರಮದಲ್ಲಿ ನಾಗರಿಕರಿಂದ ವ್ಯಕ್ತವಾಯಿತು.

ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಹನುಮಂತರಾಯ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರಮದ ಭರವಸೆ ನೀಡಲಾಯಿತು.
ನಗರದ ಹಲವೆಡೆ ಮತ್ತು ತೊಕ್ಕೊಟ್ಟು ಸುತ್ತಮುತ್ತ ಆಟೋರಿಕ್ಷಾಗಳಲ್ಲಿ ಕೆಲವೊಮ್ಮೆ ಮೀಟರ್ ಬಳಸದೆ ಚಲಾಯಿಸುತ್ತಿದಾದರೆ. ಇದರಿಂದ ಪ್ರಯಾಣಿಕರಿಗೆ ಅದರಲ್ಲೂ ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ಲಘುವಾಗಿ ಮಾತನಾಡುವುದು ಅಥವಾ ದುವರ್ತನೆ ತೋರುವ ಪ್ರಸಂಗಗಳೂ ಇವೆ ಎಂದು ನಾಗರಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಮೂಡುಬಿದಿರೆ ಪೂಪಾಡಿಕಲ್ಲು ಸಮೀಪ ಅಂಗಡಿಗಳಲ್ಲಿ ಅಕ್ರಮ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದೆ ಎಂಬ ಆರೋಪವೂ ಫೋನ್ ಮೂಲಕ ವ್ಯಕ್ತವಾಗಿದ್ದು, ಬಿಜೈ ಸೂಪರ್ ಬಜಾರ್ ಸಮೀಪ ಬ್ಯಾರಿಕೇಡ್ ಅಳವಡಿಕೆ ಮಾಡಿ ವಾಹನ ವೇಗಕ್ಕೆ ಕಡಿವಾಣ ಹಾಕಬೇಕು ಎಂಬ ಸಲಹೆ ಕೇಳಿ ಬಂತು.

ಬಿಜೈ ಕೆಎಸ್ಸಾರ್ಟಿಸಿಯಲ್ಲಿ ರಸ್ತೆಗೆ ಫುಟ್‌ಪಾತ್ ಇಲ್ಲ. ಕೋಣಾಜೆಯಿಂದ ಬರುವ ಕಂಕನಾಡಿ ಪರ್ಮಿಟ್ ಬಸ್‌ಗಳು ಸ್ಟೇಟ್‌ಬ್ಯಾಂಕ್‌ತನಕ ಟಿಕೆಟ್ ತೆಗೆದು, ಕಂಕನಾಡಿಯಲ್ಲಿ ಇಳಿಸಿ ಬೇರೆ ಬಸ್‌ನಲ್ಲಿ ಕಳುಹಿಸುತ್ತಿರುವುದರಿಂದ ತೊಂದರೆಯಾಗುತ್ತಿದೆ. ಮಾರಿಗುಡ್ಡೆ ಎದುರು ರಸ್ತೆ ಬದಿ ವಾಹನ ಪಾರ್ಕ್ ಮಾಡಿ ಬಾರ್‌ಗೆ ಹೋಗುತ್ತಾರೆ. ಇದರಿಂದ ವಾಹನ ಸವಾರರಿಗೆ, ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿದೆ.

ಜೈಲ್ ರಸ್ತೆಯಲ್ಲಿ ಎರಡು ಕಡೆ ವಾಹನ ಪಾರ್ಕಿಂಗ್ ಮಾಡಲಾಗುತ್ತಿದ್ದು, ಇದರಿಂದ ವಾಹನ ಸವಾರರಿಗೆ, ಪಾದಚಾರಿಗಳಿಗೆ ಕಷ್ಟವಾಗುತ್ತಿದೆ ಎಂಬ ಇತರ ಹಲವಾರು ದೂರುಗಳು, ಸಮಸ್ಯೆಗಳು ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ವ್ಯಕ್ತವಾಯಿತು. 

ಈ ಸಂದರ್ಭ ಇನ್‌ಸ್ಪೆಕ್ಟರ್ ಸವಿತ್ರ ತೇಜ, ಎಎಸ್‌ಐ ಯೂಸುಫ್, ಹೆಡ್‌ಕಾನ್‌ಸ್ಟೇಬಲ್ ಪುರುಷೋತ್ತಮ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News