ಶಾಂತಿ ಕಾಪಾಡಲು ಶಾಸಕ ಲೋಬೊ ಮನವಿ
ಮಂಗಳೂರು, ಜು.14: ದ.ಕ. ಜಿಲ್ಲೆಯಲ್ಲಿ ಶಾಂತಿ, ಸಹನೆ ಮತ್ತು ಸಹಿಷ್ಣತೆಯನ್ನು ಕಾಪಾಡಿ ಕೋಮುಸೌಹಾರ್ದ ಉಳಿಸಿಕೊಂಡು ಹೋಗುವಂತೆ ಶಾಸಕ ಜೆ.ಆರ್.ಲೋಬೊ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.
ದ.ಕ.ಜಿಲ್ಲೆ ಸರ್ವ ಮತ, ಧರ್ಮಕ್ಕೆ ಹೆಸರು ಪಡೆದಿದ್ದು, ಅದನ್ನು ಯಾರೂ ಕೆಡಿಸಬಾರದು. ಕ್ಷುಲ್ಲಕ ಕಾರಣಕ್ಕೆ, ರಾಜಕೀಯ ಲಾಭಕ್ಕೆ ಅನಾದಿ ಕಾಲದಿಂದ ಇದ್ದ ಹೆಸರನ್ನು ಕೆಡಿಸುವುದು ಸೂಕ್ತವಲ್ಲ. ಇದು ಜಿಲ್ಲೆಗೂ ಶೋಭೆ ತರುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಶೇಷವಾಗಿ ಮಂಗಳೂರು ಈಗ ಸ್ಮಾರ್ಟ್ ಸಿಟಿಯಾಗುತ್ತಿದೆ. ಜಿಲ್ಲೆಯನ್ನು ಇಡೀ ದೇಶವೇ ಕುತೂಹಲದಿಂದ ನೋಡುತ್ತಿದೆ. ಮಂಗಳೂರು ನಗರ ಜೀವಿಸುವುದಕ್ಕೆ ಅತ್ಯಂತ ಪ್ರಶಸ್ತ ನಗರವೆಂದು ಗುರುತಿಸಲ್ಪಟ್ಟಿದೆ. ಇಂತಹ ಜಿಲ್ಲೆಯನ್ನು ಇನ್ನಷ್ಟು ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿರುವ ಜೆ.ಆರ್.ಲೋಬೊ, ಶಿಕ್ಷಣದಲ್ಲೂ ಅಗ್ರಸ್ಥಾನದಲ್ಲಿರುವ ಜಿಲ್ಲೆಗೆ ವಿದೇಶ ಹಾಗು ಹೊರ ಜಿಲ್ಲೆಯ ವಿದ್ಯಾರ್ಥಿಗಳು ಅಪಾರ ಪ್ರಮಾಣದಲ್ಲಿ ಬರುತ್ತಿದ್ದಾರೆ.
ಕೈಗಾರಿಕೆಗಳು ಇನ್ನೂ ಹೆಚ್ಚು ಸ್ಥಾಪನೆಯಾಗಬೇಕು. ಉದ್ಯೋಗಾವಕಾಶಗಳು ಹೆಚ್ಚಾಗಬೇಕು, ಬಂಡವಾಳ ಹರಿದು ಬರಬೇಕು. ಇದಕ್ಕೆಲ್ಲಾ ಸನ್ನದ್ಧರಾಗಿ ಅವಕಾಶ ಕೊಡುವಂತಾಗಬೇಕು ಎಂದು ತಿಳಿಸಿದ್ದಾರೆ.