ಬಾಲಕಿಯೊಂದಿಗೆ ದೈಹಿಕ ಸಂಪರ್ಕ: ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು
ಪುತ್ತೂರು, ಜು. 14: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಹೊಂದಿ ಗರ್ಭಿಣಿಯನ್ನಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಯುವಕನೋರ್ವನನ್ನು ಬಂಧಿಸಿರುವ ಪುತ್ತೂರು ಗ್ರಾಮಾಂತರ ಪೊಲೀಸರು ಆತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಬದಿಯಡ್ಕ ಎಂಬಲ್ಲಿನ ನಿವಾಸಿ ಸಂಜೀವ ಎಂಬವರ ಪುತ್ರ ಜಯಾನಂದ (25) ಬಂಧಿತ ಆರೋಪಿ. ಈತ ಬಾಲಕಿಯ ಸಂಬಂಧಿಯಾಗಿದ್ದು ಇವರಿಬ್ಬರು ಪರಸ್ಪರ ಭೇಟಿಯಾಗುತ್ತಿದ್ದರು ಮತ್ತು ಬಾಲಕಿ ಮನೆಗೆ ಆರೋಪಿ ಭೇಟಿ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದು ಆಕೆ ಎರಡು ತಿಂಗಳ ಗರ್ಭಿಣಿಯಾದ ಬಳಿಕ ವಿಷಯ ಬಹಿರಂಗಗೊಂಡಿತ್ತು. ಇದೀಗ ಬಾಲಕಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇಸು ದಾಖಲಿಸಿಕೊಂಡ ಗ್ರಾಮಾಂತರ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿದಿಸಿದೆ.