×
Ad

ರಾಜ್ಯಕ್ಕೆ ಬೆಂಕಿ: ಯಡಿಯೂರಪ್ಪ ಹೇಳಿಕೆಗೆ ಸಿಪಿಎಂ ಖಂಡನೆ

Update: 2017-07-14 21:41 IST

ಉಡುಪಿ, ಜು.14: ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಬಂಧಿಸಿದರೆ ಇಡೀ ರಾಜ್ಯಕ್ಕೆ ಬೆಂಕಿ ಹತ್ತಿ ಉರಿಯುತ್ತದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಬಿ. ಎಸ್. ಯಡಿಯೂರಪ್ಪಅವರ ಹೇಳಿಕೆಯನ್ನು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.

ಇತ್ತೀಚೆಗೆ ಬಂಟ್ವಾಳ ತಾಲೂಕಿನಲ್ಲಿ ಅಶ್ರಫ್ ಮತ್ತು ಶರತ್ ಅವರ ಹತ್ಯೆಯ ನಂತರ ಜನರಲ್ಲಿ ಆತಂಕ ಉಂಟಾಗಿದೆ. ಬಿ.ಸಿ.ರೋಡ್, ಕಲ್ಲಡ್ಕ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ನಾಳೆ ಏನು ಎಂಬ ಚಿಂತೆ ಜನರನ್ನು ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಜನರಲ್ಲಿ ಧೈರ್ಯ, ಆತ್ಮವಿಶ್ವಾಸ ಮೂಡಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ ಎಂದು ಸಿಪಿಎಂ ಹೇಳಿದೆ.

ಆದರೆ ಇದರ ಬದಲಾಗಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಆಗಬಾರದು. ತುರ್ತಾಗಿ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂಬ ಹಂಬಲ ಹೊಂದಿರುವ ಯಡಿಯೂರಪ್ಪ ಬಿಕ್ಕಟ್ಟನ್ನು ಬಿಗಡಾಯಿಸಲು ಪ್ರಯತ್ನ ಮಾಡುತಿದ್ದಾರೆ. ಇದು ಖಂಡನೀಯ ಎಂದು ಸಿಪಿಎಂ ಹೇಳಿಕೆಯಲ್ಲಿ ತಿಳಿಸಿದೆ.

ಹಿಂದೆ ಮಂಗಳೂರಿನಲ್ಲಿ ಕಾರ್ತಿಕ್‌ರಾಜ್ ಎಂಬವರ ಕೊಲೆಯ ಹಿನ್ನೆಲೆಯಲ್ಲಿ ಜಿಲ್ಲೆಗೆ ಬೆಂಕಿ ಹಚ್ಚುವುದಾಗಿ ಮಂಗಳೂರಿನ ಬಿಜೆಪಿ ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲ್ ಹೇಳಿದ್ದರು. ಆದ್ದರಿಂದ ಬಿಜೆಪಿ ಎಂದರೆ ಬೆಂಕಿ ಜನತಾ ಪಕ್ಷ ಎಂಬಂತಾಗಿದೆ. ಶಾಂತಿ ಸಭೆಯಲ್ಲಿ ಭಾಗವಹಿಸದ ಬಿಜೆಪಿ ಅಶಾಂತಿಯನ್ನು ಮುಂದುವರಿಸುವ ಸೂಚನೆ ಇದೆ. ಶಾಂತಿಪ್ರಿಯ ಕರಾವಳಿ ಜನತೆ ಈ ನೀತಿಯನ್ನು ಖಂಡಿಸಬೇಕು ಎಂದು ಸಿಪಿಐ(ಎಂ) ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News