ಐದು ವರ್ಷಗಳ ಅವಧಿಯ ಪ್ರಕರಣಗಳ ಮರುಪರಿಶೀಲನೆ: ಡಿಜಿಪಿ ಆರ್.ಕೆ.ದತ್ತ ಸೂಚನೆ
ಮಂಗಳೂರು, ಜು.14: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 5 ವರ್ಷದ ಅವಧಿಯಲ್ಲಿ ನಡೆದ ಗಂಭೀರ ಪ್ರಕರಣಗಳ ಮರುಪರಿಶೀಲನೆಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತ ಹೇಳಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತಾಲಯದ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ.ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಘಟಿಸಿದ ಮತೀಯ ಗಲಭೆ, ಕೊಲೆ, ಕೊಲೆಯತ್ನ, ರೌಡಿಸಂ ಇತ್ಯಾದಿ ಗಂಭೀರ ಪ್ರಕರಣಗಳ ಮರುಪರಿಶೀಲನೆ ಮಾಡಲು ಸೂಚಿಸಲಾಗಿದೆ. ಈ ಪ್ರಕರಣಗಳ ಪೈಕಿ ಎಷ್ಟು ಮಂದಿ ಆರೋಪಿಗಳ ಸೆರೆಯಾಗಿದೆ ಮತ್ತು ಸೆರೆಯಾಗಲು ಬಾಕಿ ಇದೆ. ಆರೋಪಿಗಳ ಸದ್ಯದ ಸ್ಥಿತಿಗತಿ ಹೇಗಿದೆ? ಈಗ ಯಾವ್ಯಾವ ಪ್ರಕರಣಗಳಲ್ಲಿ ಶಾಮೀಲಾಗಿದ್ದಾರೆ ಇತ್ಯಾದಿ ಬಗ್ಗೆ ತಿಳಿಯುವ ಆವಶ್ಯಕತೆ ಇದೆ. ಅಲ್ಲದೆ ಪದೇ ಪದೇ ಶಾಂತಿಗೆ ಭಂಗ ತರುವವರ ವಿರುದ್ಧ ಗೂಂಡಾ ಕಾಯ್ದೆ, ಗಡಿಪಾರು, ಕೋಕಾ ಕಾಯ್ದೆಯನ್ನು ಬಳಸಲು ತಿಳಿಸಲಾಗಿದೆ ಎಂದರು.
ಪರಿಸ್ಥಿತಿ ಶಾಂತ: ದ.ಕ.ಜಿಲ್ಲೆಯಲ್ಲಿ ಮತೀಯ ಗಲಭೆ ವಿಪರೀತವಾಗಿದೆ, ಪರಿಸ್ಥಿತಿ ಹದಗೆಟ್ಟಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಆದರೆ, ಪರಿಸ್ಥಿತಿ ಹಾಗಿಲ್ಲ. ಎಲ್ಲ ಕಡೆಯೂ ಶಾಂತವಾಗಿದೆ. ಬಂಟ್ವಾಳ, ವಿಟ್ಲ, ಉಳ್ಳಾಲಕ್ಕೆ ತಾನು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ ಎಂದರು.
ಕಠಿಣ ಕ್ರಮ: ಜಿಲ್ಲೆಯಲ್ಲಿ ಶಾಂತಿ ಕದಡುವವರು, ಅದಕ್ಕೆ ಪ್ರಚೋದನೆ ನೀಡುವವರು ಮತ್ತು ಅದರಲ್ಲಿ ಶಾಮೀಲಾದವರು, ಹೀಗೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದು. ಜಿಲ್ಲೆಯಲ್ಲಿ ಕೋಮುಸೌಹಾರ್ದಕ್ಕೆ ಆದ್ಯತೆ ನೀಡಲು ಪರಿಶ್ರಮ ಪಡಲಾಗುತ್ತದೆ. ಈಗಾಗಲೆ ವಿವಿಧ ಸಂಘಟನೆಗಳ ಜೊತೆ ಮಾತುಕತೆ ನಡೆಸಿದ್ದು, ಈ ಸಂಘಟನೆಗಳ ಮುಖಂಡರು ಪೊಲೀಸ್ ಇಲಾಖೆಗೆ ಸಂಫೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದರು.
ಬೀಟ್ ವ್ಯವಸ್ಥೆಗೆ ವೇಗ: ಜಿಲ್ಲೆಯ ಪ್ರತೀ ಹಳ್ಳಿಯಲ್ಲೂ ಪೊಲೀಸ್ ಬೀಟ್ ವ್ಯವಸ್ಥೆ ಮಾಡಲಾಗಿದೆ. ಅದನ್ನು ಪರಿಣಾಮಕಾರಿಗೊಳಿಸಲು ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಎಸ್ಪಿಗೆ ಸೂಚನೆ ನೀಡಲಾಗಿದೆ ಎಂದು ಪತ್ರಕರ್ತರ ಪ್ರಶ್ನೆಯೊಂದಿಗೆ ಡಿಜಿಪಿ ಆರ್.ಕೆ.ದತ್ತ ಉತ್ತರಿಸಿದರು.
ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ: ಜಿಲ್ಲೆಯಲ್ಲಿ ಶಾಂತಿ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಜಲೀಲ್ ಕರೋಪಾಡಿ ಹತ್ಯೆ, ಅಶ್ರಫ್ ಕಲಾಯಿ ಹತ್ಯೆ, ರತ್ನಾಕರ ಶೆಟ್ಟಿಯ ಕೊಲೆಯತ್ನ ಹೀಗೆ ಪ್ರಮುಖ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ಷಿಪ್ರಗತಿಯಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ರಾತ್ರಿ ಹಗಲೆನ್ನದೆ ಬಂದೋಬಸ್ತ್ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎಂದು ಡಿಜಿಪಿ ಆರ್.ಕೆ.ದತ್ತ ನುಡಿದರು.
ಸುದ್ದಿಗೋಷ್ಠಿಯಲ್ಲಿ ಎಡಿಜಿಪಿ ಅಲೋಕ್ ಮೋಹನ್, ಪಶ್ಚಿಮ ವಲಯ ಐಜಿಪಿ ಹರಿಶೇಖರನ್, ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಉಪಸ್ಥಿತರಿದ್ದರು.
ಶರತ್ ಹತ್ಯೆ ಆರೋಪಿಗಳ ಸುಳಿವು ಲಭ್ಯ: ಆರೆಸ್ಸೆಸ್ಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಲಾಗಿದ್ದು, ಆರೋಪಿಗಳ ಸುಳಿವು ಲಭ್ಯವಾಗಿದೆ. ಸದ್ಯದಲ್ಲೇ ಆರೋಪಿಗಳ ವಿವರ ಬಹಿರಂಗಪಡಿಸಲಾಗುವುದು ಎಂದು ಡಿಜಿಪಿ ಆರ್.ಕೆ.ದತ್ತ ಹೇಳಿದರು.
ಫಿಕ್ಸಿಂಗ್‌ಗೆ ಅವಕಾಶವಿಲ್ಲ: ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿಷ್ಪಕ್ಷಪಾತ ತನಿಖೆ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಫಿಕ್ಸಿಂಗ್ ಮಾಡುವುದಿಲ್ಲ. ಅದೊಂದು ಕೆಟ್ಟ ಪರಂಪರೆ. ತನಿಖೆ ಸ್ವಲ್ಪ ವಿಳಂಬವಾದರೂ ಕೂಡ ನೈಜ ಆರೋಪಿಗಳನ್ನು ಬಂಧಿಸಲಾಗುವುದು.
ಕೊಣಾಜೆ ಠಾಣಾ ವ್ಯಾಪ್ತಿಯ ಕಾರ್ತಿಕ್ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಆರೋಪ-ಪ್ರತ್ಯಾರೋಪ ಕೇಳಿ ಬಂತು, ಸಂಶಯ ವ್ಯಕ್ತವಾಯಿತು. ತನಿಖೆಗೆ ಸುಮಾರು 5 ತಿಂಗಳನ್ನು ತೆಗೆದುಕೊಂಡರೂ ಕೂಡ ಕೊನೆಗೆ ನೈಜ ಆರೋಪಿಗಳನ್ನು ಬಂಧಿಸಲು ಸಾಧ್ಯವಾಯಿತು. ಹಾಗಾಗಿ ತರಾತುರಿಯಲ್ಲಿ ಯಾರ್ಯಾರನ್ನೋ ಬಂಧಿಸುವುದಿಲ್ಲ ಎಂದು ಡಿಜಿಪಿ ಆರ್.ಕೆ.ದತ್ತ ಸ್ಪಷ್ಟಪಡಿಸಿದರು.
ಪ್ರಚೋದನಕಾರಿ ವರದಿ ಬೇಡ: ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ವಿವಿಧ ಮಾಧ್ಯಮಗಳ ವರದಿ, ಸುದ್ದಿ ಪ್ರಸಾರವೇ ಕಾರಣ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಹಾಗಾಗಿ ಮಾಧ್ಯಮಗಳು ವಸ್ತುನಿಷ್ಠ ವರದಿಗೆ ಆದ್ಯತೆ ನೀಡಬೇಕು. ಮತೀಯ ಸೌಹಾರ್ದ ಕಾಪಾಡಲು ಪೊಲೀಸ್ ಇಲಾಖೆಯ ಜೊತೆ ಕೈ ಜೋಡಿಸಬೇಕು ಎಂದು ಡಿಜಿಪಿ ಆರ್.ಕೆ.ದತ್ತ ಮನವಿ ಮಾಡಿದರು.