×
Ad

ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಂದ ಅಶ್ರಫ್, ಶರತ್ ಹತ್ಯೆ ಸ್ಥಳಕ್ಕೆ ಭೇಟಿ

Update: 2017-07-14 22:35 IST

ಡಿಜಿ ಬಂಟ್ವಾಳ, ಜು. 14: ತಾಲೂಕಿಗೆ ಶುಕ್ರವಾರ ಭೇಟಿ ನೀಡಿದ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಆರ್.ಕೆ.ದತ್ತಾ, ಅಶ್ರಫ್ ಕಲಾಯಿ, ಶರತ್ ಮಡಿವಾಳ ಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತದನಂತರ ವಿಟ್ಲ ಪೊಲೀಸ್ ಠಾಣೆಗೆ ಭೇಟಿ ನೀಡಿ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎ.ಅಬ್ದುಲ್ ಜಲೀಲ್ ಕರೋಪಾಡಿ ಹತ್ಯೆ ಪ್ರಕರಣದ ಬಗ್ಗೆ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೇಕಾದ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಯಾರೂ ಗಲಭೆಗೆ ಸಂಬಧಿಸಿ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಬಾರದು. ಹಾಗೆ ನೀಡುವುದರಿಂದ ಕೋಮು ಸೌಹಾರ್ದತೆಗೆ ದಕ್ಕೆ ಯಾಗುವ ಸಾಧ್ಯತೆ ಇದೆ ಎಂದರು.

ಕೋಮು ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ಕೋಮಿನವರ ಜೊತೆಗೆ ಪೊಲೀಸ್ ಇಲಾಖೆ ನಿರಂತರ ಸಭೆಗಳನ್ನು ನಡೆಸಲಾಗುತ್ತಿದೆ. ಬೇರೆ ಬೇರೆ ಆಯಾಮದಲ್ಲಿ ಬೇರೆ ಬೇರೆ ಜಾತಿಯ ಮುಂಡರ ಜತೆಗೆ ಸಭೆಗಳನ್ನು ಇನ್ನು ಮುಂದೆಯೂ ನಡೆಸಲಾಗುವುದು. ಪ್ರತಿಯೊಂದು ಜಾತಿಯವರಲ್ಲೂ ಸೌಹಾರ್ದತೆ - ಶಾಂತಿ ಕಾಪಾಡುವ ನಿಟ್ಟಿನಲ್ಲಿ ಜವಾಬ್ದಾರಿಯ ಬಗ್ಗೆ ಮನದಟ್ಟು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇಲಾಖೆಯಲ್ಲಿ ಬಹಳ ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆಯದ ಹಿನ್ನಲೆಯಲ್ಲಿ ಸಿಬ್ಬಂದಿ ಕೊರತೆ ಇತ್ತು. 2013ರ ಬಳಿಕ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು ಕೊರತೆ ಕಡಿಮೆಯಾಗುತ್ತಿದೆ. ಪೊಲೀಸ್ ಠಾಣೆಯಲ್ಲಿ ಯಾವುದೇ ಕೊರತೆ ಇರದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಗಡಿಭಾಗವಾದ ಕನ್ಯಾನದಲ್ಲಿ ಹೊರ ಠಾಣೆಯ ಬೇಡಿಕೆ ಇದ್ದರೆ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಜಲೀಲ್ ಕೊಲೆ ಪ್ರಕರಣದಲ್ಲಿ ಯಾವುದೇ ಗೊಂದಲಗಳು ಬೇಡ. ಯಾರು ಹತ್ಯೆಯ ಸ್ಥಳದಲ್ಲಿ ಪಾಲ್ಗೊಂಡಿದ್ದರೋ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಹೆಚ್ಚುವರಿ ಆಯಾಮದಲ್ಲಿ ತನಿಖೆಗಳು ನಡೆಯುತ್ತಿದ್ದು, ಬಳಿಕ ಬೇರೆಯವರ ಪಾಲ್ಗೊಳ್ಳುವಿಕೆಯ ಹಾಗೂ ಬಂಧನದ ಬಗ್ಗೆ ನೋಡಲಾಗುವುದು ಎಂದರು.

ಕಾನೂನು ಸುವ್ಯವಸ್ಥೆಯ ಮಹಾನಿರ್ದೇಶಕ ಅಲೋಕ್ ಮೋಹನ್, ಪೊಲೀಸ್ ಮಹಾನಿರೀಕ್ಷಕ ಪಿ.ಹರಿಶೇಖರನ್, ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಎಚ್.ಸುಧೀರ್ ಕುಮಾರ್ ರೆಡ್ಡಿ, ಹೆಚ್ಚುವರಿ ಅಧೀಕ್ಷಕ ವಿಷ್ಣುವರ್ಧನ್, ಬಂಟ್ವಾಳ ಉಪ ವಿಭಾಗದ ಸಹಾಯಕ ಅಧೀಕ್ಷಕ ಡಾ. ಅಶೋಕ್, ಬಂಟ್ವಾಳ ವೃತ್ತ ನಿರೀಕ್ಷಕರಾಗಿದ್ದ ಮಂಜಯ್ಯ, ವಿಟ್ಲ ಠಾಣೆಯ ಉಪನಿರೀಕ್ಷಕ ನಾಗರಾಜ್, ಬಂಟ್ವಾಳ ನಗರ ಉಪನಿರೀಕ್ಷಕ ರಕ್ಷಿತ್ ಎ. ಕೆ. ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News