‘ಮಧ್ಯಸ್ಥಿಕೆಯಿಂದ ಪ್ರಕರಣಗಳ ಶೀಘ್ರ ಇತ್ಯರ್ಥ ಸಾಧ್ಯ’ ಜಿಲ್ಲಾ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ
ಉಡುಪಿ, ಜು.14: ದೇಶದಲ್ಲಿ ನ್ಯಾಯಾಧೀಶರ ಸಂಖ್ಯೆ ಕಡಿಮೆ ಇರುವು ದರಿಂದ ನ್ಯಾಯಾಲಯಕ್ಕೆ ಬಂದ ಪ್ರಕರಣಗಳ ವಿಲೇವಾರಿ ವಿಳಂಬವಾಗುತ್ತಿದೆ. ಉಡುಪಿ ಜಿಲ್ಲೆಯೊಂದರಲ್ಲಿಯೇ 1968ರಿಂದ ಈವರೆಗೆ 23 ಸಾವಿರ ಕಡತ ವಿಲೇವಾರಿಗೆ ಬಾಕಿ ಇದೆ. ಹೀಗಾಗಿ ಮಧ್ಯಸ್ಥಿಕೆ ವಹಿಸುವ ಪ್ರಕ್ರಿಯೆ ಹೆಚ್ಚಾದಲ್ಲಿ ಪ್ರಕರಣಗಳ ಶೀಘ್ರ ಇತ್ಯರ್ಥ ಸಾಧ್ಯವಾಗಲಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ವೆಂಕಟೇಶ ನಾಯ್ಕ ಟಿ. ಹೇಳಿದ್ದಾರೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ತಾಪಂ ಸಭಾಂಗಣದಲ್ಲಿ ಮಧ್ಯಸ್ಥಿಕೆದಾರರಿಗಾಗಿ ಆಯೋಜಿಸಲಾದ ಜಿಲ್ಲಾ ಮಟ್ಟದ ಮೂರು ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಹಿಂದಿನ ದಿನಗಳಲ್ಲಿ ದೇಶದಲ್ಲಿ ನ್ಯಾಯ ದೊರಕಿಸುವ ಪ್ರಕ್ರಿಯೆ ಸರಳ ಹಾಗೂ ಸುಲಭವಾಗಿತ್ತು. ಹಳ್ಳಿಕಟ್ಟೆ, ಪಂಚಾಯತ್ ಕಟ್ಟೆಗಳಲ್ಲಿ ಒಂದೇ ದಿನದಲ್ಲಿ ಪ್ರಕರಣ ಇತ್ಯರ್ಥವಾಗಿ ಬಿಡುತ್ತಿತ್ತು. ಆದರೆ ಈಗ ಕಾನೂನು ಹೆಚ್ಚು ಹೆಚ್ಚು ಸಂಕೀರ್ಣ ಗೊಳ್ಳುತ್ತಿದ್ದು, ಇದರಿಂದ ನೀತಿತತ್ವದಡಿ ಶೀಘ್ರ ಅರ್ಜಿಯನ್ನು ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದವರು ಅಭಿಪ್ರಾಯಪಟ್ಟರು.
ಇದಕ್ಕಾಗಿ ಎರಡೂ ಕಡೆಯವರನ್ನು ಮಾತುಕತೆಗೆ ಕರೆದು ಮಧ್ಯಸ್ಥಿಕೆ ಮೂಲಕ ಇತ್ಯರ್ಥಗೊಳಿಸುವುದು ಉತ್ತಮ ಮಾರ್ಗ. ಮಧ್ಯಸ್ಥಿಕೆದಾರರಿಗೆ ಆಳವಾದ ಕಾನೂನಿನ ಜ್ಞಾನ, ವಿಷಯದ ಜ್ಞಾನ ಅತ್ಯಗತ್ಯ. ಮಧ್ಯಸ್ಥಿಕೆಯಿಂದ ಶೇ.25 ರಷ್ಟು ಪ್ರಕರಣಗಳನ್ನು ಕಡಿಮೆಗೊಳಿಸಲು ಸಾಧ್ಯವಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಮಾಧವ ಆಚಾರ್ ಮಾತನಾಡಿ ಯಾವುದೇ ಸಂಕೀರ್ಣತೆ ಇರುವ ಪ್ರಕರಣಗಳನ್ನು ರಾಜಿಯಲ್ಲಿ ಕೊನೆಗೊಳಿಸುವುದರಿಂದ ಎರಡೂ ಕಡೆಯವರಿಗೂ ಅನ್ಯಾಯವಾಗುವುದಿಲ್ಲ. ಇದರಿಂದ ಸಾಮಾಜಿಕ ನ್ಯಾಯ ದೊರೆಯುತ್ತದೆ.ಇದು ನಾ್ಯಯಾಂಗದ ಉತ್ತಮ ಕಾರ್ಯ ಎಂದರು.
ಉಡುಪಿ ವಕೀಲರ ಸಂಘದ ಅಧ್ಯಕ್ಷ ಎಚ್. ರತ್ನಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ, ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ವಿವೇಕಾನಂದ ಎಸ್. ಪಂಡಿತ್, ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ತರಬೇತಿದಾರ ಎಸ್.ಎನ್. ಪ್ರಶಾಂತ್‌ಚಂದ್ರ, ಜೋ ಜೋಸೆಫ್, ಉಡುಪಿ ತಾಪಂ ಅಧ್ಯಕ್ಷ ಳಿನಿ ಪ್ರದೀಪ್‌ರಾವ್ ಉಪಸ್ಥಿತರಿದ್ದರು
ಹಿರಿಯ ಸಿವಿಲ್ ನ್ಯಾಯಾಧೀಶೆ ಲತಾ ಸ್ವಾಗತಿಸಿದರು. ಶ್ರೀಶ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.