×
Ad

ಕವಿ ಬಿ.ಎ.ಸನದಿಗೆ ದಶಮಾನೋತ್ಸವ ಗೌರವ

Update: 2017-07-14 22:55 IST

ಉಡುಪಿ, ಜು.14: ಪ್ರೀತಿಯೆಂಬುದು ಒಂದು ಪ್ರಶಸ್ತ ಚುಂಬಕ ಶಕ್ತಿ. ವ್ಯಕ್ತಿಯ ವ್ಯಕ್ತಿತ್ವದ ಮೇಲೆ, ಅವನ ಕೆಲಸ-ಸಾಧನೆಗಳ ಮೇಲೆ ಇಂತಹ ಪ್ರೀತಿ ಗೌರವವೇ ನಮ್ಮನ್ನು ಪರಸ್ಪರ ಸೆಳೆಯುತ್ತವೆ ಎಂದು ಪಂಪ ಪ್ರಶಸ್ತಿ ಪುರಸ್ಕೃತ ಕವಿ, ಆಕಾಶವಾಣಿ ಮಾಧ್ಯಮದ ಹಿರಿಯ ಚೇತನ ಬಿ.ಎ ಸನದಿ ಹೇಳಿದ್ದಾರೆ.

ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಉಡುಪಿ ಜಿಲ್ಲಾ ಘಟಕದ ವತಿಯಿಂದ ‘ಹಿರಿಯರೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮದ ದಶಮಾನೋತ್ಸವ ಪ್ರಯುಕ್ತ ಕೊಡಮಾಡಲಾದ ಗೌರವವನ್ನು ಗುರುವಾರ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ನನಗೆ ಭಾಷೆಯ ಮೇಲೆ ಪ್ರೀತಿ ಇದೆ. ಆದರೆ ಭಾಷಾ ವ್ಯಾಮೋಹವಿರಲಿಲ್ಲ. ಹೀಗಾಗಿ ಆಯಾ ಭಾಷೆಯ ಜನರೊಡನೆ ಅವರ ಭಾಷೆಯಲ್ಲಿ ಪ್ರೀತಿ ವಿಶ್ವಾಸ ಹಂಚಿಕೊಳ್ಳುವುದು ಸಾಧ್ಯವಾಯಿತು. ಸಾಮರಸ್ಯದ ಬದುಕೇ ಅತ್ಯಂತ ಶ್ರೇಷ್ಠ ಎಂದವರು ನುಡಿದರು.

ಸನದಿ ಅವರನ್ನು ಗೌರವಿಸಿ ಮಾತನಾಡಿದ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಸಾಹಿತ್ಯದಲ್ಲಿ ಕೀರ್ತಿಗಳಿಸಿದ ಸನದಿ ಅವರು ಜನರ ಮನಸ್ಸಿನಲ್ಲಿ ಉಳಿಯುವ ಕೆಲಸಗಳನ್ನು ಮಾಡಿದ್ದಾರೆ. ಇಂತಹ ವ್ಯಕ್ತಿ ಗಳನ್ನು ಗೌರವಿಸುವುದೇ ಒಂದು ಸಾರ್ಥಕ್ಯದ ಕ್ಷಣ. ಅವರು ನೂರು ಕಾಲ ಬಾಳಲಿ ಎಂದು ಶುಭಹಾರೈಸಿದರು.

ಪ್ರಾದೇಶಿಕ ಭಾಷೆಗಳ ಬಗೆಗಿನ ಕೀಳರಿಮೆ ಸಲ್ಲದು. ನೆಲದ ಭಾಷೆ, ಜಲದ ಭಾಷೆ, ಮನಸ್ಸಿನ ಭಾಷೆಗೆ ಹೆಚ್ಚಿನ ಗೌರವ ಸಿಗಬೇಕು. ಸನದಿ ಈ ನಿಟ್ಟಿನಲ್ಲಿ ವಿಶಿಷ್ಟವಾಗಿ ಆಲೋಚಿಸಿದವರು ಎಂದು ಅತಿಥಿಗಳಾಗಿದ್ದ ಪಂಚನಬೆಟ್ಟು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎ.ನರಸಿಂಹ ಹೇಳಿದರು.

ವೇದಿಕೆಯ ಜಿಲ್ಲಾಧ್ಯಕ್ಷ ಹಾಗೂ ಸಂಘಟಕ ಶೇಖರ ಅಜೆಕಾರು ಮಾತನಾಡಿ, ಸನದಿ ಮಾನವ್ಯ ಕವಿ. ಅವರು ತಾವು ಹೇಳಿದ್ದನ್ನು ಹಾಗೂ ವಿಶ್ವ ಮಾನದ ವಿಚಾರ-ತತ್ವಗಳನ್ನು ತಮ್ಮ ಬದುಕಲ್ಲಿ ಬದುಕಿ ತೋರಿಸಿದ್ದಾರೆ ಎಂದರು.

ಪ್ರಾಧ್ಯಾಪಕ ಮಂಜಪ್ಪ ದ್ಯಾ. ಗೋಣಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರೆ, ಕುಂದಾಪ್ರ ಡಾಟ್‌ಕಾಮ್ ಸಂಪಾದಕ ಸುನೀಲ್ ಬೈಂದೂರು, ನಜಿರಾ ಸನದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News