×
Ad

ಪಡುಬೆಳ್ಳೆ ಸಾಮೂಹಿಕ ಆತ್ಯಹತ್ಯೆ: ಇನ್ನೂ ಬಯಲಾಗದ ಕಾರಣ

Update: 2017-07-14 23:20 IST

ಉಡುಪಿ, ಜು.14: ಪಡುಬೆಳ್ಳೆಯಲ್ಲಿ ನಿನ್ನೆ ನಡೆದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆತ್ಮಹತ್ಯೆಯ ಕಾರಣವನ್ನು ಬೇಧಿಸಲು ಇನ್ನೂ ಸಾದ್ಯವಾಗಿಲ್ಲ.

ಪಡುಬೆಳ್ಳೆಯಲ್ಲಿ ಶ್ರೀಯಾ ಜುವೆಲ್ಲರಿಯ ಮಾಲಕ ಶಂಕರ ಆಚಾರ್ಯ, ಅವರ ಪತ್ನಿ ನಿರ್ಮಲಾ ಆಚಾರ್ಯ ಹಾಗೂ ಪುತ್ರಿಯರಾದ ಶ್ರುತಿ ಆಚಾರ್ಯ ಮತ್ತು ಶ್ರೀಯಾ ಆಚಾರ್ಯ ನಿನ್ನೆ ಸೈನೈಡ್‌ನಂಥ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಪಡುಬೆಳ್ಳೆಯ ಮೃತರ ಮನೆ ಹಾಗೂ ಪೇಟೆಯಲ್ಲಿರುವ ಜುವೆಲ್ಲರಿಯನ್ನು ಇಂದು ಪೊಲೀಸರು ಜಾಲಾಡಿದರೂ ಯಾವುದೇ ಡೆತ್‌ನೋಟ್ ಸೇರಿದಂತೆ ಯಾವುದೇ ಕ್ಲೂ ಸಿಗಲಿಲ್ಲ. ಶಂಕರ ಆಚಾರ್ಯರ ಮನೆಯ ಪಕ್ಕದಲ್ಲೇ ಇರುವ ಅವರ ಸಹೋದರರನ್ನು ವಿಚಾರಿಸಿದರೂ ಅವರಿಂದಲೂ ಯಾವುದೇ ಸ್ಪಷ್ಟ ಮಾಹಿತಿ ದೊರಕಿಲ್ಲ. ಹೀಗಾಗಿ ನಾವು ಇನ್ನೂ ಕತ್ತಲಲ್ಲೇ ಪರದಾಡುತ್ತಿದ್ದೇವೆ ಎಂದು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಬಾಲಕೃಷ್ಣ ಇಂದು ಪಡುಬೆಳ್ಳೆಗೆ ಭೇಟಿ ನೀಡಿದ್ದರು. ನಿನ್ನೆ ಬೆಳಗ್ಗೆ 7:30ರ ಸುಮಾರಿಗೆ ನಿರ್ಮಲಾ ಅವರನ್ನು ಮನೆಯ ಹೊರಗೆ ನೋಡಿರುವುದನ್ನು ಪಕ್ಕದ ಮನೆಯವರು ಹಾಗೂ ಸಹೋದರರು ಖಚಿತ ಪಡಿಸಿದ್ದಾರೆ. ಆದರೆ 8:30ರ ಸುಮಾರಿಗೆ ಮನೆಯಲ್ಲಿದ್ದ ನಾಲ್ವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ವಿಷ ಬಾಟ್ಲಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ವರದಿ ಬಂದ ಬಳಿಕ ಅವರು ಸೇವಿಸಿದ ವಿಷದ ಕುರಿತು ತಿಳಿಯಲಿದೆ. ಅದೇ ರೀತಿ ಪೋಸ್ಟ್‌ಮಾರ್ಟಂ ವರದಿಗಾಗಿಯೂ ಕಾಯಲಾಗುತಿದ್ದು, ಅದರ ಮೂಲಕ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ ಎಂದು ಎಸ್ಪಿ ತಿಳಿಸಿದರು.

ಬುಧವಾರ ರಾತ್ರಿ ಹಿರಿಯ ಮಗಳ ಮದುವೆಗೆ ಕಲ್ಯಾಣ ಮಂಟಪ ಬುಕ್ ಮಾಡುವ ಕುರಿತು ಶಂಕರ ಆಚಾರ್ಯರು ತಮ್ಮನ ಬಳಿ ಚರ್ಚಿಸಿ ದ್ದರೆಂದು ತಿಳಿದುಬಂದಿದೆ. ಅಲ್ಲದೇ ಆತ್ಮಹತ್ಯೆ ನಿರ್ಧಾರವನ್ನು ಹಠಾತ್ತನೆ ತೆಗೆದುಕೊಂಡಿರಬಹುದು ಎಂಬ ಸಂಶಯವೂ ಪೊಲೀಸರನ್ನು ಕಾಡುತ್ತಿದೆ. 7:30ರ ಸುಮಾರಿಗೆ ಕಂಡ ನಿರ್ಮಲಾ 8:30ರ ಸುಮಾರಿಗೆ ಮನೆಯವರೊಂದಿಗೆ ಹೆಣವಾಗಿ ಪತ್ತೆಯಾಗಿರುವುದು ಈ ಸಂಶಯಕ್ಕೆ ಕಾರಣವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News