ಜಿಲ್ಲೆಯಲ್ಲಿ ಶಾಂತಿಗೆ ಸಲಫಿ ಮೂವ್‍ಮೆಂಟ್ ಮನವಿ
ಮಂಗಳೂರು,ಜು.15: ರಾಜಕೀಯ ಮತ್ತು ಆರ್ಥಿಕ ಲಾಭದ ದುರುದ್ದೇಶದಿಂದ ಜನರಲ್ಲಿ ಮತೀಯ ಭಾವನೆಯನ್ನು ಕೆರಳಿಸಿ ಹಿಂದು –ಮುಸ್ಲಿಮರ ಮಧ್ಯೆ ಸಂಘರ್ಷದ ಕಿಚ್ಚು ಹಚ್ಚುವ ರಾಜಕೀಯ ಪಕ್ಷಗಳ ಮತ್ತು ಮತೀಯ ಸಂಘಟನೆಗಳ ಷಢ್ಯಂತ್ರಕ್ಕೆ ಬಲಿಯಾಗದೆ ನಾಡಿನ ಅಭಿವೃದ್ಧಿ ಮತ್ತು ಸಾಮರಸ್ಯಕ್ಕಾಗಿ ಯುವ ಶಕ್ತಿಯನ್ನು ಸದ್ವಿನಿಯೋಗಗೊಳಿಸಬೇಕೆಂದು ಯುವ ಸಮುದಾಯಕ್ಕೆ ಸೌತ್ ಕರ್ನಾಟಕ ಸಲಫಿ ಮೂವ್‍ಮೆಂಟ್ ಕರೆ ನೀಡಿದೆ.
ಹಿಂದು – ಮುಸ್ಲಿಮ್ ಸಮುದಾಯಗಳು ಸಹೋದರರಂತೆ ಬಾಳುತ್ತಿದ್ದ ದ.ಕ. ಜಿಲ್ಲೆಯಲ್ಲಿ ಕೆಲವು ರಾಜಕೀಯ ಪಕ್ಷಗಳು ಮತ್ತು ಉಭಯ ಕೋಮುಗಳ ಮತೀಯ ಸಂಘಟನೆಗಳು ತಮ್ಮ ಸ್ವಾರ್ಥ ಮತ್ತು ಆರ್ಥಿಕ ಲಾಭ ಗಳಿಕೆಯ ದುರುದ್ದೇಶದಿಂದ ಮುಗ್ಧ ಯುವಕರ ಮೆದುಳಲ್ಲಿ ಮತಾಂಧತೆಯ ವಿಷ ಬೀಜ ಬಿತ್ತಿ ಹಿಂದು-ಮುಸ್ಲಿಮ್ ಗಲಭೆ ಸೃಷ್ಟಿಸಿ ಎರಡೂ ಕಡೆಯ ಯುವಕರನ್ನು ಮತೀಯ ಅಪರಾಧಿಗಳಾಗಿ ಮಾಡಿ ನಾಡಿನ ಶಾಂತಿ ಕೆಡಿಸುತ್ತಿದ್ದಾರೆ, ಮತ್ತು ಧರ್ಮದ ಪಾವಿತ್ರ್ಯತೆಗೆ ಅಪಚಾರವೆಸಗುತ್ತಿದ್ದಾರೆ. ಇಂತಹ ದುಷ್ಟ ಶಕ್ತಿಗಳ ದುರುದ್ದೇಶವನ್ನು ಬಯಲಿಗೆಳೆದು ಜಿಲ್ಲೆಯಲ್ಲಿ ಶಾಶ್ವತ ಶಾಂತಿಯನ್ನು ನೆಲೆಗೊಳಿಸಲು ಎಲ್ಲಾ ಧರ್ಮಗಳ ರಾಜಕೀಯೇತರ ಮುಖಂಡರು ಮುಂದಾಗಬೇಕೆಂದು ಸಲಫಿ ಮೂವ್‍ಮೆಂಟ್‍ನ ಕೇಂದ್ರೀಯ ಮಂಡಳಿ ಉಪಾಧ್ಯಕ್ಷ ಇಸ್ಮಾಯಿಲ್ ಶಾಫಿ ಮನವಿ ಮಾಡಿದ್ದಾರೆ.