ಎಸ್‌ಬಿಐ ಉಳಿತಾಯ ಖಾತೆ: ಕನಿಷ್ಠ ಶಿಲ್ಕು, ಎಟಿಎಂ ಹಿಂದೆಗೆತ ಬಗ್ಗೆ ನಿಯಮಗಳು
ಹೊಸದಿಲ್ಲಿ,ಜು.15: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ) ತನ್ನ ಉಳಿತಾಯ ಖಾತೆಗಳಲ್ಲಿ ನಿಗದಿತ ಶಿಲ್ಕು ಇಲ್ಲದಿದ್ದರೆ 100 ರೂ.ವರೆಗೆ ದಂಡವನ್ನು ವಿಧಿಸುತ್ತಿದೆ. ಜೊತೆಗೆ ಗ್ರಾಹಕರು ಶೇ.18ರಷ್ಟು ಜಿಎಸ್‌ಟಿಯನ್ನೂ ಕಕ್ಕಬೇಕಾಗುತ್ತದೆ.
ಎಸ್‌ಬಿಐನ ಮಹಾನಗರ, ನಗರ, ಅರೆನಗರ ಮತ್ತು ಗ್ರಾಮೀಣ ಬ್ಯಾಂಕುಗಳಲ್ಲಿ ಉಳಿತಾಯ ಖಾತೆಗಳನ್ನು ಹೊಂದಿರುವ ಗ್ರಾಹಕರು ಮಾಸಿಕ ಸರಾಸರಿ ಶಿಲ್ಕು (ಎಂಎಬಿ) ಕಾಯ್ದುಕೊಳ್ಳದಿದ್ದರೆ 50 ರೂ.ಗಳಿಂದ 100 ರೂ.ವರೆಗೆ (ತೆರಿಗೆ ಹೊರತುಪಡಿಸಿ) ದಂಡ ಪಾವತಿಸಬೇಕಾಗುತ್ತದೆ.
ಮಹಾನಗರ ಶಾಖೆಗಳಲ್ಲಿಯ ಉಳಿತಾಯ ಖಾತೆಗಳಲ್ಲಿ 5,000 ರೂ.ಗಳ ಎಂಎಬಿ ಕಾಯ್ದುಕೊಳ್ಳಬೇಕಾಗುತ್ತದೆ. ತಿಂಗಳಿಗೆ ಸರಾಸರಿ ಶಿಲ್ಕು ಶೂನ್ಯದಿಂದ 1,500 ರೂ.ವರೆಗೆ ಇದ್ದರೆ ದಂಡವಾಗಿ 100 ರೂ. ಮತ್ತು ತೆರಿಗೆಯನ್ನು ಕಟ್ಟಬೇಕಾಗುತ್ತದೆ. ಎಂಎಬಿ 1,500 ರೂ.ನಿಂದ 2,500 ರೂ.ವರೆಗಿದ್ದರೆ ದಂಡವಾಗಿ 75 ರೂ.ಮತ್ತು ತೆರಿಗೆಯನ್ನು ಕಟ್ಟಬೇಕಾಗುತ್ತದೆ. ಎಂಎಬಿ 2500 ರೂ.ಗಿಂತ ಮೇಲೆ,ಆದರೆ 5,000 ರೂ.ಗಿಂತ ಕಡಿಮೆಯಿದ್ದರೆ 50 ರೂ.ದಂಡ ಮತ್ತು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದರೆ ನಗರ, ಅರೆನಗರ ಮತ್ತು ಗ್ರಾಮೀಣ ಶಾಖೆಗಳಲ್ಲಿ ಎಂಎಬಿಯನ್ನು ಅನುಕ್ರಮವಾಗಿ 3,000 ರೂ., 2,000 ರೂ. ಮತ್ತು 1,000 ರೂ.ಗಳಿಗೆ ನಿಗದಿಗೊಳಿಸಲಾಗಿದೆ.
ಎಟಿಎಂ ಶುಲ್ಕಗಳು
ಎಸ್‌ಬಿಐ ಮಹಾನಗರಗಳಲ್ಲಿ ಪ್ರತಿ ತಿಂಗಳಿಗೆ ತನ್ನ ಎಟಿಎಂಗಳಲ್ಲಿ ಐದು ಬಾರಿ ಮತ್ತು ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ಮೂರು ಬಾರಿ,ಹೀಗೆ ಒಟ್ಟೂ ಎಂಟು ಬಾರಿ ಹಣ ಹಿಂದೆಗೆದುಕೊಳ್ಳಲು ಉಚಿತ ಅವಕಾಶ ಕಲ್ಪಿಸಿದೆ. ಮಹಾನಗರಗಳನ್ನು ಹೊರತು ಪಡಿಸಿ ಇತರ ಪ್ರದೇಶಗಳಲ್ಲಿ ಹತ್ತು ಬಾರಿ(ಎಸ್‌ಬಿಐ 5 ಮತ್ತು ಇತರ ಬ್ಯಾಂಕುಗಳಿಂದ ಐದು ಬಾರಿ) ಎಟಿಎಂಗಳಿಂದ ಯಾವುದೇ ಶುಲ್ಕವಿಲ್ಲದೆ ಹಣವನ್ನು ಹಿಂದೆಗೆಯ ಬಹುದಾಗಿದೆ.
ಈ ಮಿತಿಯನ್ನು ಮೀರಿದ ಬಳಿಕ ಪ್ರತಿಯೊಂದು ಹಿಂದೆಗೆತಕ್ಕೂ 20 ರೂ.ಶುಲ್ಕ ಮತ್ತು ತೆರಿಗೆಯನ್ನು ವಿಧಿಸಲಾಗುತ್ತದೆ. ಆದರೆ ಬೇಸಿಕ್ ಉಳಿತಾಯ ಖಾತೆದಾರರು ಶಾಖೆಗಳಿಂದ ಮತ್ತು ಎಟಿಎಂಗಳಿಂದ ಸೇರಿದಂತೆ ತಿಂಗಳಿಗೆ ನಾಲ್ಕು ಬಾರಿ ಮಾತ್ರ ಹಣವನ್ನು ಉಚಿತವಾಗಿ ಹಿಂಪಡೆಯ ಬಹುದಾಗಿದೆ. ಈ ಮಿತಿಯನ್ನು ದಾಟಿದರೆ ಶಾಖೆಯಿಂದ ಪ್ರತಿ ಬಾರಿ ಹಣ ಹಿಂದೆಗೆತಕ್ಕೆ 50 ರೂ.ಶುಲ್ಕ ಮತ್ತು ತೆರಿಗೆಯನ್ನು ವಿಧಿಸಲಾಗುತ್ತದೆ. ಇತರ ಬ್ಯಾಂಕ್‌ಗಳ ಎಟಿಎಂನಿಂದ ಹಣ ಹಿಂಪಡೆದರೆ 20 ರೂ.ಮತ್ತು ಎಸ್‌ಬಿಐ ಎಟಿಎಂಗಳಿಂದ ಹಣ ಹಿಂಪಡೆದರೆ 10 ರೂ.ಶುಲ್ಕ ವಿಧಿಸಲಾಗುತ್ತದೆ.