ಯಡ್ತರೆ ಮದ್ಯದಂಗಡಿಗೆ ವಿರೋಧ: ಅಬಕಾರಿ ಡಿಸಿಗೆ ಮನವಿ
ಉಡುಪಿ, ಜು.15: ಬೈಂದೂರಿನ ಯಡ್ತರೆ ಗ್ರಾಪಂ ವ್ಯಾಪ್ತಿಯ ಬಂಕೇಶ್ವರದ ಕಾವೇರಿ ಮಾರ್ಗದ ಜನವಸತಿ ಪ್ರದೇಶದಲ್ಲಿ ಮದ್ಯದಂಗಡಿ ಆರಂಭಿಸುವುದನ್ನು ವಿರೋಧಿಸಿ ಸ್ಥಳೀಯ ಗ್ರಾಮಸ್ಥರು ಶನಿವಾರ ಉಡುಪಿ ಅಬಕಾರಿ ಇಲಾಖೆಯ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮದ್ಯದಂಗಡಿ ಆರಂಭಿಸಲು ಉದ್ದೇಶಿಸಿರುವ ಪರಿಸರದಲ್ಲಿ ಸಾಕಷ್ಟು ವಾಸ್ತವ್ಯದ ಮನೆಗಳಿದ್ದು, ಇದೇ ರಸ್ತೆಯಲ್ಲಿ ಪ್ರತಿದಿನ ಉದ್ಯೋಗಸ್ಥ ಮಹಿಳೆ, ಶಾಲಾ ಕಾಲೇಜು ವಿದ್ಯಾರ್ಥಿಗಳು ಹೋಗುತ್ತಿರುತ್ತಾರೆ. ಆದುದರಿಂದ ಇದು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಗ್ರಾಮಸ್ಥರು ಮನವಿಯಲ್ಲಿ ದೂರಿದ್ದಾರೆ.
ಈ ಪ್ರದೇಶದಿಂದ 50 ಮೀಟರ್ ದೂರದಲ್ಲಿ ಅಂಗನವಾಡಿ ಕೇಂದ್ರ, 150 ಮೀಟರ್ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 66 ಇದ್ದು, ಇಲ್ಲಿ ಮದ್ಯದಂಗಡಿಗೆ ಅವಕಾಶ ನೀಡಿದರೆ ಜನತೆಯ ನೆಮ್ಮದಿ ಹಾಳಾಗುತ್ತದೆ ಎಂದು ಅವರು ತಿಳಿಸಿದರು. ಈ ಕುರಿತು ಬೈಂದೂರು ತಹಶೀಲ್ದಾರ್, ಪೊಲೀಸರು, ಅಬಕಾರಿ ಇಲಾಖೆಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಥಳ ಪರಿಶೀಲನೆಯಾಗಲಿ, ಗ್ರಾಮಸ್ಥರ ಜೊತೆ ಮಾತುಕತೆಯಾಗಲಿ ಮಾಡಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.