ತೊನ್ನು ರೋಗ ಪೂರ್ವಜನ್ಮದ ಪಾಪ ಅಲ್ಲ: ಡಾ.ಸುಭಾಷ್ ಕಿಣಿ
ಉಡುಪಿ, ಜು.15: ಸಾಂಕ್ರಮಿಕ ಮತ್ತು ಮಾರಣಾಂತಿಕವೂ ಅಲ್ಲದ ಚರ್ಮ ಸಂಬಂಧಿ ತೊನ್ನು ರೋಗವು ಪೂರ್ವಜನ್ಮದ ಪಾಪದಿಂದ ಬರುವುದಲ್ಲ. ಈ ಕುರಿತು ಜನರಲ್ಲಿನ ಅಪನಂಬಿಕೆ, ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕು ಎಂದು ಉಡುಪಿ ಜಿಲ್ಲಾಸ್ಪತ್ರೆಯ ಚರ್ಮರೋಗ ತಜ್ಞ ಡಾ.ಸುಭಾಷ್ ಕಿಣಿ ಹೇಳಿದ್ದಾರೆ.
ಭಾರತೀಯ ಚರ್ಮ ರೋಗ, ಲೈಂಗಿಕ ರೋಗ ಹಾಗೂ ಕುಷ್ಠ ರೋಗ ತಜ್ಞರ ಸಂಘ ರಾಜ್ಯ ಶಾಖೆ ಮತ್ತು ಬೆಂಗಳೂರು ಚರ್ಮ ವೈದ್ಯರ ಸಂಘದ ವತಿಯಿಂದ ಮಣಿಪಾಲ ಕೆಎಂಸಿ ಚರ್ಮರೋಗ ಚಿಕಿತ್ಸಾ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ತೊನ್ನು ಸಂಚಾರಿ ಮಾಹಿತಿ ವಾಹಿನಿ ಶನಿವಾರ ಉಡುಪಿ ಕ್ಲಾಕ್ ಟವರ್ ಬಳಿ ಆಗಮಿಸಿದ್ದು, ಈ ವೇಳೆ ನಡೆದ ಜನಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡುತಿದ್ದರು. ಚರ್ಮ ಸಂಬಂಧಿ ರೋಗವನ್ನು ಪ್ರಾರಂಭದಲ್ಲಿಯೇ ಗುರುತಿಸಿದರೆ ಔಷಧಿ ಹಾಗೂ ಶಸ್ತ್ರ ಚಿಕಿತ್ಸೆಯ ಮೂಲಕ ಸಂಪೂರ್ಣ ಗುಣಪಡಿಸಬಹುದು. ಇದರಿಂದ ಪ್ರಾಣಹಾನಿಯಿಲ್ಲ. ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ ಎಂದು ಅವರು ತಿಳಿಸಿದರು.
ಉಡುಪಿಯ ಚರ್ಮರೋಗ ವೈದ್ಯ ಡಾ.ಶ್ರೀಪತಿ ಭಟ್ ಮಾತನಾಡಿ, ತೊನ್ನು ರೋಗ ಪೀಡಿತರನ್ನು ಮದುವೆಯಾಗುವುದರಿಂದ ಯಾವುದೇ ಸಮಸ್ಯೆ ಆಗಲ್ಲ. ಈ ರೋಗ ಪೀಡಿತರು ಆರೋಗ್ಯವಾಗಿಯೇ ಇರುತ್ತಾರೆ. ಇದರಿಂದ ದೈನಂದಿನ ಜೀವನಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದರು.
ಕೆಎಂಸಿ ಮಣಿಪಾಲದ ಚರ್ಮರೋಗ ಚಿಕಿತ್ಸಾ ವಿಭಾಗ ಮುಖ್ಯಸ್ಥ ಡಾ. ಸತೀಶ್ ಪೈ ಮಾತನಾಡಿ, ಚರ್ಮ ಬಿಳಿಯಾಗುವ ಒಂದು ಸಾಮಾನ್ಯ ಪ್ರಕ್ರಿಯೆಯಾಗಿರುವ ತೊನ್ನು ರೋಗವು 100ರಲ್ಲಿ ಒಬ್ಬರು ಅಥವಾ ಇಬ್ಬರಲ್ಲಿ ಕಂಡು ಬರುತ್ತದೆ. ತೊನ್ನು ಕಾಣಿಸುವ ಜಾಗದಲ್ಲಿ ಚರ್ಮಕ್ಕೆ ಬಣ್ಣ ಕೊಡುವ ಕಣದಲ್ಲಿ ಉತ್ಪತ್ತಿಯಾಗುವ ಮೆಲನೋಸೈಟ್ ಜೀವಕೋಶ ನಾಶವಾಗಿ ಚರ್ಮ ಬಿಳಿ ಯಾಗುತ್ತದೆ. ಶೇ.80 ಜನರಲ್ಲಿ ಅನುವಂಶೀಯವಾಗಿ ಕಂಡುಬರುವುದಿಲ್ಲ ಎಂದರು.
ವೈದ್ಯಕೀಯ ಪ್ರತಿನಿಧಿ ಸಂಘದ ಮಧುಸೂದನ್ ಹೇರೂರು, ರಾಘವೇಂದ್ರ ರಾಜ್, ಡಾ.ಸನತ್ ರಾವ್, ಡಾ.ದೀಪಕ್, ಉಡುಪಿ ಪ.ಪೂ. ಕಾಲೇಜಿನ ಎನ್ನೆಸ್ಸೆಸ್ ಯೋಜನಾಧಿಕಾರಿ ಪರಮೇಶ್ವರ್, ಶ್ರೀನಾಥ್ ಕೋಟ ಮೊದಲಾದ ವರು ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಮಣಿಪಾಲ ಟೈಗರ್ ಸರ್ಕಲ್ ಬಳಿ, ಬಳಿಕ ಸಿಂಡಿಕೇಟ್ ಬ್ಯಾಂಕ್, ನಂತರ ಅಜ್ಜರಕಾಡಿನ ಜಿಲ್ಲಾಸ್ಪತ್ರೆ ಬಳಿ ಜನಜಾಗೃತಿ ಅಭಿಯಾನವನ್ನು ನಡೆಸಲಾಯಿತು.