ಗದ್ದೆಗಿಳಿದು ನೇಜಿ ನೆಟ್ಟ ಕಟಪಾಡಿಯ ವಿದ್ಯಾರ್ಥಿಗಳು
Update: 2017-07-15 19:22 IST
ಕಾಪು, ಜು.15: ಕಟಪಾಡಿ ಎಸ್‌ವಿಎಸ್ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳು ಶಾಲಾ ಸಂಚಾಲಕ ಕೆ.ವಸಂತ ಮಾಧವ ಭಟ್ ಸಾರಥ್ಯದಲ್ಲಿ ಅವರದೇ ಕೃಷಿ ಗದ್ದೆಯಲ್ಲಿ ಇತ್ತೀಚೆಗೆ ನಾಟಿ ಕಾರ್ಯ ನಡೆಸಿದರು.
ನಶಿಸುತ್ತಿರುವ ಕೃಷಿ ಚಟುವಟಿಕೆಗಳಿಂದಾಗಿ ಇವತ್ತಿನ ಮಕ್ಕಳಿಗೆ ಗ್ರಾಮೀಣ ಭಾಗದಲ್ಲಿಯೂ ಕೃಷಿಯ ಪರಿಚಯವಾಗುತ್ತಿಲ್ಲ. ಕೃಷಿ ಇವತ್ತು ಜನರ ಜೀವನದಿಂದ ದೂರವಾಗುತ್ತಿದೆ. ಹೀಗಾಗಿ ನಾವು ಉಣ್ಣುವ ಅನ್ನ ಉತ್ಪಾದನೆಯಾಗುವುದು ಎಲ್ಲಿಂದ ಎಂಬ ಪ್ರಾಥಮಿಕ ತಿಳುವಳಿಕೆ ಮಕ್ಕಳಿಗೆ ಇಲ್ಲವಾಗಿದೆ. ಇಂತಹ ಪ್ರಾಯೋಗಿಕ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಒದಗಿಸಬೇಕಾದುದು ಇಂದಿನ ಶಿಕ್ಷಣ ವ್ಯವಸ್ಥೆಯ ಭಾಗವಾಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಸಂತ ಮಾಧವ ಭಟ್ ತಿಳಿಸಿದರು.
ಸುಮಾರು 150 ವಿದ್ಯಾರ್ಥಿಗಳು ಕೆಸರು ಗದ್ದೆಗಿಳಿದು ನೇಜಿ ನಾಟಿ ಕಾರ್ಯದಲ್ಲಿ ತೊಡಗಿಕೊಂಡರು. ಶಾಲಾ ಅಧ್ಯಾಪಕ ವೃಂದವು ವಿದ್ಯಾರ್ಥಿಗಳೊಂದಿಗೆ ಈ ಚಟುವಟಿಕೆಯಲ್ಲಿ ಪಾಲ್ಗೊಂಡಿತು.