×
Ad

ಪಡುಬಿದ್ರಿ ಪ್ರದೇಶದಲ್ಲಿ ನೆರೆ ಹಾವಳಿ : ಭಾಗಶಃ ಕುಸಿದ ಮನೆ

Update: 2017-07-15 19:30 IST

ಪಡುಬಿದ್ರಿ,ಜು.15: ಪಡುಬಿದ್ರಿ ಪ್ರದೇಶದಲ್ಲಿ ಕೆಲವೆಡೆ ನೆರೆ ಕಾಣಿಸಿದ್ದು, ಎಲ್ಲೂರಿನಲ್ಲಿ ಮನೆಯೊಂದು ಭಾಗಶಃ ಕುಸಿದ ಘಟನೆ ಶನಿವಾರ ನಡೆದಿದೆ.

ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಿಬೆಟ್ಟು ಭದ್ರಕಾಳಿ ದೇವಸ್ಥಾನ ಬಳಿಯ ಫೀರಂಬಿ ಎಂಬುವರ ಮನೆ ಭಾಗಶಃ ಕುಸಿದು ಸಾವಿರಾರು ರೂ. ನಷ್ಟವಾಗಿದೆ. ಮನೆ ಅಡಿಗೆ ಕೋಣೆಯಲ್ಲಿದ್ದ ಫೀರಂಬಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಸ್ಥಳಕ್ಕೆ ಎಲ್ಲೂರು ಗ್ರಾಪಂ ಉಪಾಧ್ಯಕ್ಷ ಜಯಂತ್ ಭಟ್ ಮತ್ತು ಗ್ರಾಮಕರಣಿಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೃತಕ ನೆರೆ:  ನಡ್ಸಾಲು ಬೀಚ್ ರಸ್ತೆಯ ಬಸ್ ಟೈಂ ಕೀಪರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಗಣೇಶ್ ಕೋಟ್ಯಾನ್ ಅವರ ಮನೆಯಲಿ ಕೃತಕ ನೆರೆ ಉಂಟಾಗಿದೆ.

ವೃದ್ಧ ತಾಯಿ ಹಾಗೂ ದಿವ್ಯಾಂಗಳಾದ ಅಕ್ಕನೊಂದಿಗೆ ಗಣೇಶ್ ವಾಸಿಸುತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಇಲ್ಲಿ ವಾಸವಾಗಿದ್ದರೂ ಈವರೆಗೆ ಈ ಪ್ರದೇಶದಲ್ಲಿ ನೆರೆ ಹಾವಳಿ ಇರಲಿಲ್ಲ. ಇದೀಗ ಮನೆ ಸುತ್ತಮುತ್ತಲಿನ ಜಮೀನನ್ನು ಖಾಸಗಿ ವ್ಯಕ್ತಿಗಳು ಖರೀದಿಸಿ ಮಣ್ಣು ತುಂಬಿಸಿದ ಪರಿಣಾಮ ಮನೆ ಜಲಾವೃತವಾಗಿದೆ ಎಂದು ಗಣೇಶ್ ದೂರಿದ್ದಾರೆ.

ಪಡುಬಿದ್ರಿ  ಗ್ರಾಪಂಗೆ ಈ ಬಗ್ಗೆ ದೂರು ನೀಡಲಾಗಿದ್ದು, ಗ್ರಾಪಂ ಅಧ್ಯಕ್ಷೆ, ಪಿಡಿಒ ಅವರು ಜೆಸಿಬಿ ಸಹಾಯದಿಂದ ಖಾಸಗಿ ವ್ಯಕ್ತಿಗಳು ಮಣ್ಣು ತುಂಬಿಸಿದ ಸ್ಥಳವನ್ನು ಅಗೆದು ನೀರು ಹರಿದು ಹೋಗಲು ಮುಂದಾದರೆ, ಸ್ಥಳದ ಮಾಲೀಕರು ಅದಕ್ಕೆ ಅವಕಾಶ ನೀಡದೆ ಪಂಚಾಯತ್‍ನವರನ್ನು ಹಿಂದಕ್ಕೆ ಕಳುಹಿಸಿದ್ದಾರೆ ಎಂದರು.

ನೆರೆಯ ಪರಿಣಾಮ ಅನಾರೋಗ್ಯ ಪೀಡಿತ ತಾಯಿಯನ್ನು ಆಸ್ಪತ್ರೆಗೂ ಕರೆದುಕೊಳ್ಳಲಾಗದ ಪರಿಸ್ಥಿತಿ ಬಂದೊದಗಿದೆ.  ಕಳೆದ ಒಂದು ವಾರದಿಂದ ಕೆಲಸಕ್ಕೆ ಹೋಗದೆ ತಾಯಿ ಮತ್ತು ಅಕ್ಕನ ಆರೈಕೆ ಮಾಡಲು ಮನೆಯಲ್ಲಿಯೇ ಉಳಿಯುವಂತಾಗಿದೆ. ನೆರೆಯಿಂದಾಗಿ ಅಕ್ಕ ಪಕ್ಕದವರ ಸಂಪರ್ಕವು ಕಡಿತವಾಗಿದೆ . ಪಂಚಾಯತ್‍ನವರು ತಮ್ಮ ಅಸಾಯಕತೆಯನ್ನು ತೋರ್ಪಡಿಸಿ ಹಿಂದೆ ಸರಿದ ಮೇಲೆ ಪಕ್ಕದ ಜಾಗ ಖರೀದಿ ಮಾಡಿದವರ ಬಳಿ ಹೋಗಿ ಒಮ್ಮೆ ನಮಗೆ ನೀರು ಹೋಗಲು ಆಸ್ಪದ ಮಾಡಿ ಕೊಡಿ ಎಂದು ಗೋಗರೆದರೂ, ಅವರು,  ನಾಲ್ಕು ದಿನ ನೀರಲ್ಲಿ ಕೂತರೆ ಏನು ಆಗುವುದಿಲ್ಲ ಎಂಬ ಉಡಾಫೆಯ ಉತ್ತರವನ್ನು ನೀಡಿದ್ದಾರೆ. ನೀರು ನಿಂತಿದ್ದರಿಂದ ನಮ್ಮ ಇಡೀ ಸಂಸಾರಕ್ಕೆ ತೊಂದರೆಯಾಗಿದೆ. ನಮಗೆ ನ್ಯಾಯ ದೊರಕಿಸಿ ಕೊಡಿ ಎಂದು ಗಣೇಶ್ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News