×
Ad

ಯಡಿಯೂರಪ್ಪ ಹಾಗೂ ಶೋಭಾ ರ ಸಂಸತ್ ಸದಸ್ಯತ್ವ ರದ್ದತಿಗೆ ಎಸ್.ಡಿ.ಪಿ.ಐ ಆಗ್ರಹ

Update: 2017-07-15 19:46 IST

ಭಟ್ಕಳ,ಜು.15:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ನಿರಂತರವಾಗಿ ಕೋಮುಗಲಭೆಗಳನ್ನು ಪ್ರಚೋದಿಸುತ್ತಿರುವ ಸಂಸದರಾದ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆಯವರ ಸಂಸತ್ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಆಗ್ರಹಸಿ ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಎಸ್.ಡಿ.ಪಿ.ಐ ಶನಿವಾರ ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗಳಿಗೆ ಮನವಿಯನ್ನು ಅರ್ಪಿಸಿತು.

ದ.ಕ ಜಿಲ್ಲೆಯಲ್ಲಿ ನಡೆದ ಕೋಮುಗಲಭೆಯಲ್ಲಿ ಇಬ್ಬರು ಅಮಾಯಕರ ಕೊಲೆಯಾಗಿದ್ದು 12ಚೂರಿ ಇರಿತ ಪ್ರಕರಣಗಳು ನಡೆದಿರುತ್ತವೆ. ಅಲ್ಲಿ ನಿರಂತರವಾಗಿ 144 ಸೆಕ್ಷನ್ ಜಾರಿಯಲ್ಲಿದ್ದರೂ ಶರತ್ ಕುಮಾರ್ ಕೊಲೆಯನ್ನು ಖಂಡಿಸುವ ನೆಪದಲ್ಲಿ ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಸಿರೋಡ್ ನಲ್ಲಿ ಸಾವಿರಾರು ಜನರನ್ನು ಸೇರಿಸಿ ಪ್ರಕ್ಷುಬ್ಧ ವಾತವರಣ ನಿರ್ಮಿಸಿದ್ದಲ್ಲದೆ ಸೂತಕದ ವಾತವರಣದಲ್ಲೂ ಕುಣಿದು ಕುಪ್ಪಳಿಸಿ ಮೃತ ಶರತ್ ರಿಗೆ ಅವಮಾನ ಮಾಡಿರುತ್ತಾರೆ.

ಶರತ್ ಕೊಲೆ ಪ್ರಕರಣ ನಡೆಸುತ್ತಿರುವ ಪೊಲೀಸ್ ತನಿಖೆಗೆ ಹಾದಿ ತಪ್ಪಿಸಲು ಎಸ್.ಡಿ.ಪಿಐ ಹಾಗೂ ಪಿಎಫ್‍ಐ ಕಾರ್ಯಕರ್ತರೇ ಈ ಕೊಲೆಯನ್ನು ಮಾಡಿದ್ದಾರೆ ಎಂಬ ಹೇಳಿಕೆಗಳನ್ನು ನೀಡುತ್ತಿದ್ದು ಜಿಲ್ಲೆಯನ್ನು ಮತ್ತಷ್ಟು ಅರಾಜಕತೆಯಡೆ ಕೊಂಡೊಯುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. 

ಕಳೆದ ನಾಲ್ಕು ವರ್ಷಗಳಲ್ಲಿ ಆತ್ಮಹತ್ಯೆ, ಸರ್ಕಾರಿ ಉದ್ಯೋಗಿಗಳ ಸಾವುಗಳಿಗೆ ಕೋಮುಬಣ್ಣ ನೀಡಿ ಸಮಾಜದಲ್ಲಿ ಅರಾಜಕತೆಯನ್ನು ಸೃಷ್ಟಿಸಲಾಗುತ್ತಿದೆ. ಸಂಘಪರಿವಾರ, ಬಿಜೆಪಿ ನಿರಂತರವಾಗಿ ಜಿಲ್ಲೆಯಲ್ಲಿ ಕೋಮುದ್ವೇಷ ಹರಡುತ್ತಿದೆ. ಸೂತಕದ ಮನೆಯಲ್ಲಿ ರಾಜಕೀಯ ಮಾಡುತಿರುವ ಇವರನ್ನು ಕಾನೂನಿನಡಿ ತಂದು ಇಲ್ಲಿನ ಕೋಮುಗಲಭೆಗಳನ್ನು ಕೊನೆಗಾಣಿಸಬೇಕು. ಬಿಜೆಪಿ ಸಂಸದರು, ಶಾಸಕರು ಮತ್ತು ಸಂಘಪರಿವಾರದ ನಾಯಕರಾದ ಕಲ್ಲಡ್ಕ ಪ್ರಭಾಕರ್ ಭಟ್, ಶರಣ್ ಪಂಪವೆಲ್, ಜಗದೀಶ್ ಶೇಣವ್,ಮುರುಳೀರಾವ್ ಹಂಸತಡ್ಕ, ಸತ್ಯಜಿತ್ ಸುರತ್ಕಲ್ ಮೊದಲಾದವರ ಮೇಲೆ ಕೇಸು ದಾಖಲಿಸಬೇಕು. ಇದಕ್ಕೆ ಪ್ರಚೋದಿಸುತ್ತಿರುವ ಬಿಜೆಪಿ ಸಂಸದರಾದ ಶೋಭಾ ಕರಂದ್ಲಾಜೆ ಮತ್ತು ಪ್ರಭಾಕರ್ ಭಟ್ ರನ್ನು ಬಂಧಿಸಿದರೆ ಇಡೀ ರಾಜ್ಯವೇ ಹೊತ್ತಿ ಉರಿಯಲಿದೆ ಎಂಬ ಪ್ರಚೋದನಕಾರಿ ಹೇಳಿಕೆ ನೀಡಿರುವ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಯಡಿಯೂರಪ್ಪರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಲು ಸೂಕ್ತಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದೆ.

ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಭಟ್ಕಳ ತಾಲೂಕು ಅಧ್ಯಕ್ಷ ಯೂಸೂಫ್ ಮುಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಹೀರ್ ಆಹ್ಮದ್, ಭಟ್ಕಳ ತಾಲೂಕು ಪ್ರಧಾನ ಕಾರ್ಯದರ್ಶಿ ಅಝೀಮ್ ಖೂಮಿ, ಸದಸ್ಯರಾದ ನಬೀಲ್, ಸರ್ಫರಾಝ್ ಖಾನ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News