ಮೃತಪಟ್ಟವರ ಘನತೆಯನ್ನು ಗೌರವಿಸಿ: ಸುಪ್ರೀಂ ಸೂಚನೆ
ಹೊಸದಿಲ್ಲಿ, ಜು.15: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾರ್ಗದರ್ಶಿ ಸೂತ್ರವನ್ನು ಅನುಸರಿಸಿ ಎಂದು ರಾಜ್ಯ ಸರಕಾರಗಳಿಗೆ ಸೂಚಿಸಿರುವ ಸುಪ್ರೀಂಕೋರ್ಟ್, ಮೃತಪಟ್ಟವರ ಘನತೆಯನ್ನು ಗೌರವಿಸಬೇಕು ಎಂದು ತಿಳಿಸಿದೆ.
ಬದುಕಿರುವ ವ್ಯಕ್ತಿಗಳ ಘನತೆಯನ್ನು ಮಾತ್ರ ಗೌರವಿಸಿದರೆ ಸಾಕು ಎಂಬ ಭಾವನೆ ಸಲ್ಲದು. ಮೃತಪಟ್ಟ ವ್ಯಕ್ತಿಗಳಿಗೂ ಸೂಕ್ತ ಗೌರವ ಸಲ್ಲಬೇಕು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸೂಚನೆ ಮತ್ತು ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸದ ಹೊರತು, ಮೃತವ್ಯಕ್ತಿಗಳಿಗೆ ದೊರಕಬೇಕಾದ ಗೌರವ ಮತ್ತು ನಮ್ಮೆಲ್ಲರ ಮಾನವ ಹಕ್ಕುಗಳು ಕೇವಲ ಕಾಗದದ ಬರಹಗಳಾಗಿ ಮಾತ್ರ ಉಳಿಯುತ್ತದೆ ಎಂದು ನ್ಯಾಯಮೂರ್ತಿ ಎಂ.ಬಿ.ಲೋಕುರ್ ಮತ್ತು ಯು.ಯು.ಲಲಿತ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.
ತಾನು ರೂಪಿಸಿರುವ ಮಾರ್ಗದರ್ಶಿ ಸೂತ್ರ ಹಾಗೂ ಸೂಚನೆಗಳು ಕೇವಲ ಕಾಗದದ ಬರಹಗಳಾಗಿವೆ. ಇವನ್ನು ಯಾವುದೇ ರಾಜ್ಯ ಸರಕಾರ ಜಾರಿಗೊಳಿಸಿಲ್ಲ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಹೇಳಿಕೆ ನೀಡಿದೆ. ಪ್ರತಿಯೊಂದು ರಾಜ್ಯವೂ ಮಾನವ ಹಕ್ಕುಗಳ ಆಯೋಗ ರಚಿಸಬೇಕೆಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ . ಮಾನವ ಹಕ್ಕುಗಳ ಆಯೋಗ ರಚಿಸಬೇಕು ಎಂದು ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡುವುದು ಸೂಕ್ತವಲ್ಲ ಎಂದೂ ಸುಪ್ರೀಂಕೋರ್ಟ್ ತಿಳಿಸಿದೆ. ಆದರೆ ಶೀಘ್ರ ಆಯೋಗವನ್ನು ರಚಿಸುವ ಮೂಲಕ ಪ್ರತಿಯೊಬ್ಬ ನಾಗರಿಕನ ಬದುಕನ್ನು ಮತ್ತು ಸ್ವಾತಂತ್ರವನ್ನು ರಕ್ಷಿಸುವ ನಿಟ್ಟಿನಲ್ಲಿ ಒಂದು ಪುಟ್ಟ ಹೆಜ್ಜೆ ಮುಂದಿಡಬೇಕು ಎಂಬುದನ್ನು ರಾಜ್ಯಗಳ ಗಮನಕ್ಕೆ ತರಬಯಸುತ್ತೇವೆ ಎಂದು ನ್ಯಾಯಾಲಯದ ಪೀಠ ತಿಳಿಸಿದೆ.
ಜೊತೆಗೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತನ್ನ ವಾರ್ಷಿಕ ವರದಿಯನ್ನು ಪ್ರಕಟಿಸದಿರುವ ಬಗ್ಗೆಯೂ ಸುಪ್ರೀಂಕೋರ್ಟ್ ಅಸಮಾಧಾನ ಸೂಚಿಸಿದೆ. ಆಯೋಗದ ವೆಬ್‌ಸೈಟ್‌ನಲ್ಲಿ ಇರುವ ವರದಿ 2012-13ಕ್ಕೆ ಸಂಬಂಧಿಸಿದ್ದು. ಆ ಬಳಿಕ ಹಲವು ವರ್ಷಗಳೇ ಸಂದಿವೆ. ಆದ್ದರಿಂದ ತಕ್ಷಣ ವರದಿಯನ್ನು ಪ್ರಕಟಿಸಬೇಕು ಎಂದು ತಿಳಿಸಿದೆ.