ಬೆಳಕಿಂಡಿ ಪ್ರಕಾಶನದಿಂದ ಜಾನಪದ ಹಬ್ಬ ಶ್ರೀ ಹರಿಸೇವಾ ಕಾರ್ಯಕೃತಿ ಬಿಡುಗಡೆ
ಭಟ್ಕಳ,ಜು.15: ಬೆಳಕಿಂಡಿ ಪ್ರಕಾಶನ ಶಿರಾಲಿಯ ವತಿಯಿಂದ ಡಾ. ಆರ್. ವಿ. ಸರಾಫ್ ಅವರು ರಚಿಸಿದ ಕೃತಿ ಭಟ್ಕಳ ತಾಲೂಕಿನ ಜಾನಪದ ಹಬ್ಬ ಶ್ರೀ ಹರಿಸೇವಾ ಕಾರ್ಯ ಕೃತಿಯನ್ನು ಶಿರಾಲಿಯ ಜನತಾ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶಾಸಕ ಮಂಕಾಳ ವೈದ್ಯ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು ವಿಶೇಷವಾಗಿ ಭಟ್ಕಳ ತಾಲೂಕಿನಲ್ಲಿ ಮಾತ್ರ ತಿರುಪತಿ ತಿಮ್ಮಪ್ಪ ದೇವರ ಪ್ರೀತ್ಯರ್ಥವಾಗಿ ನಡೆಯುತ್ತಿರುವ ಹರಿಸೇವಾ ಕಾರ್ಯವು ಅತ್ಯಂತ ಭಕ್ತಿ-ಭಾವದಿಂದ ನಡೆಯುವ ದೇವತಾ ಕಾರ್ಯಗಳಲ್ಲಿ ಒಂದಾಗಿದೆ. ಇಲ್ಲಿಯ ತನಕ ಹರಿಸೇವಾ ಕಾರ್ಯಗಳು ನಡೆಸಿಕೊಂಡು ಬರಲಾಗುತ್ತಿದ್ದು ಅದಕ್ಕೆ ಅದರದೇ ಆದ ಹಲವಾರು ಕಟ್ಟುಪಾಡುಗಳಿವೆ. ಅಂತಹ ಕಟ್ಟುಪಾಡುಗಳಿಗೆ ಇಲ್ಲಿಯ ತನಕ ಲಿಖಿತ ರೂಪವಿಲ್ಲವಾಗಿತ್ತು. ಡಾ. ಆರ್. ವಿ. ಸರಾಫ್ ಅವರು 2-34 ವರ್ಷಗಳಿಂದ ಅವುಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರ ತಂದಿರುವುದು ಒಂದು ದಾಖಲೆಯಾಗಿ ಉಳಿಯಲಿದೆ. ಯಾವುದೇ ಒಂದು ವ್ಯಕ್ತಿ ಇರುವ ತನಕ ಮಾತ್ರ, ಆದರೆ ಪುಸ್ತಕಗಳು ಸರ್ವಕಾಲಿಕ ದಾಖಲೆಯಾಗಬಲ್ಲವು ಎಂದೂ ಹೇಳಿದರು.
ಇಂದು ಕರಾವಳಿಯಲ್ಲಿ ಮಳೆ, ಬೆಳೆ, ಜನ-ಜೀವನ ಉತ್ತಮವಾಗಿರಬೇಕಾದರೆ ನಮ್ಮ ಧಾರ್ಮಿಕ ಕಟ್ಟಳೆಗಳು, ನಂಬಿಕೆಗಳೇ ಕಾರಣವಾಗಿದೆ. ನಾವು ಆಚರಿಸುವ ಧಾರ್ಮಿಕ ಆಚರಣೆಗಳು ನಮ್ಮ ಈ ಭಾಗವನ್ನು ಸುರಕ್ಷಿತವಾಗಿಟ್ಟಿದೆ ಎಂದೂ ಅವರು ಅಭಿಪ್ರಾಯ ಪಟ್ಟರು. ಹರಿಸೇವಾ ಕಾರ್ಯದ ಕುರಿತು ಎಲ್ಲರಿಗೂ ತಿಳಿಯುವಂತೆ ಈ ಪುಸ್ತಕವನ್ನು ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳ ಗ್ರಂಥಾಲಯಗಳಿಗೆ ಹಾಗೂ ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕವನ್ನು ಇಡುವಂತೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಉಧ್ಯಮಿ ಡಿ.ಜೆ. ಕಾಮತ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿರಾಲಿ ಗ್ರಾ.ಪಂ.ಅಧ್ಯಕ್ಷ ವೆಂಕಟೇಶ ನಾಯ್ಕ, ಜ್ಯೂನಿಯರ್ ಕಾಲೇಜು ಉಪನ್ಯಾಸಕ ದೇವೇಂದ್ರ ನಾಯ್ಕ, ಅತಿಥಿಗಳಾಗಿ ನಾಮಧಾರಿ ಸಮಾಜದ ಪ್ರಮುಖ ಜೆ.ಜೆ.ನಾಯ್ಕ, ಮೊಗೇರ ಸಮಾಜದ ಪ್ರಮುಖ ಗೋವಿಂದ ನಾರಾಯಣ ಮೊಗೇರ, ದೇವಾಡಿಗ ಸಮಾಜದ ಪ್ರಮುಖ ವೆಂಕ್ಟಯ್ಯ ಭೈರುಮನೆ, ನಿವೃತ್ತ ಶಿಕ್ಷಕ ಎಂ.ಬಿ.ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಶಾರದಹೊಳೆಯ ಜೆ.ಜೆ. ನಾಯ್ಕ ಕೃತಿ ಪರಿಚಯ ಮಾಡಿದರು.
ವಿದ್ಯಾರ್ಥಿನಿಯರಾದ ದೀಕ್ಷಾ ಮತ್ತು ಫಾತಿಮಾ ಪ್ರಾರ್ಥನೆ ಹಾಡಿದರು. ಕೃತಿ ರಚಿಸಿದ ಡಾ. ಆರ್. ವಿ. ಸರಾಫ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಶ್ರೀಧರ ಶೇಟ್ ಕಾರ್ಯಕ್ರಮ ನಿರೂಪಿಸಿದರು.