×
Ad

ಪುತ್ತೂರು: ನವಜಾತ ಶಿಶುವಿನ ಮೃತದೇಹವನ್ನು ಕಚ್ಚಿ ಓಡಾಡಿದ ಬೀದಿನಾಯಿ

Update: 2017-07-15 20:16 IST
ಸಾಂದರ್ಭಿಕ ಚಿತ್ರ

ಪುತ್ತೂರು,ಜು.15: ಕಳೆದ ಮೂರು ದಿನಗಳ ಹಿಂದೆ ಮೃತಪಟ್ಟಿದ್ದ ನವಜಾತ ಶಿಶುವಿನ ಮೃತದೇಹವನ್ನು ನಾಯಿಯೊಂದು ಕಚ್ಚಿಕೊಂಡು ಓಡಾಡಿದ ಘಟನೆ ಪುತ್ತೂರು ಸರ್ಕಾರಿ ಆಸ್ಪತ್ರೆಯ ಬಳಿಯಲ್ಲಿ ನಡೆದಿದೆ.

ಶನಿವಾರ ಸಂಜೆ ಸರಕಾರಿ ಆಸ್ಪತ್ರೆಯ ಹಿಂಬದಿಯ ಆವರಣ ಗೋಡೆಯ ಹೊರಗೆ ಬೀದಿ ನಾಯೊಂದು ಏನನ್ನೋ ಕಚ್ಚಿಕೊಂಡು ಓಡುತ್ತಿರುವುದನ್ನು ಕಂಡ ಸ್ಥಳೀಯರು ನಾಯಿಯನ್ನು ಬೆನ್ನಟ್ಟಿದಾಗ ನಾಯಿಯ ಬಾಯಲ್ಲಿ ಮಗುವಿನ ಮೃತದೇಹ ಕಂಡು ಬಂದಿತ್ತು. ಜನರು ನಾಯಿಯನ್ನು ಓಡಿಸಿದಾಗ ಆಸ್ಪತ್ರೆಯ ಹಿಂಬದಿ ಕಳೇಬರವನ್ನು ಬಿಟ್ಟು ಓಡಿತು. ಈ ವಿಷಯ ಗೊತ್ತಾಗುತ್ತಲೇ ಜನ ಜಮಾಯಿಸಿದ್ದರು. ಕೆಲವರು ಹತ್ತಿರ ಹೋಗಿ ಪರಿಶೀಲಿಸಿದಾಗ ಅದು ಪುಟ್ಟ ಮಗುವಿನ ಮೃತದೇಹವೆಂಬುದು ತಿಳಿದು ಬಂತು.

ಆಗಲೇ ಆ ಕಳೇಬರದ ಕೈ ಮತ್ತು ಕಾಲು ಕತ್ತರಿಸಲ್ಪಟ್ಟಿದ್ದು, ಅಳಿದುಳಿದ ಮಾಂಸದ ಮುದ್ದೆಯನ್ನು ನಾಯಿ ಅತ್ತಿಂದಿತ್ತ ಎತ್ತಿಕೊಂಡೊಯ್ಯುತ್ತಿತ್ತು. ಬಳಿಕ ಆಸ್ಪತ್ರೆಯವರಿಗೆ ವಿಷಯ ತಿಳಿಸಿದ ಕಾರಣ ಸಿಬ್ಬಂದಿ ಬಂದು ಕಳೇಬರದ ಮೇಲೆ ಬಿಳಿ ಬಟ್ಟೆ ಹಾಸಿದರು.

ವಿಷಯ ತಿಳಿದ ಪುತ್ತೂರು ನಗರ ಠಾಣೆಯ ಎಸ್‍ಐ ಓಮನಾ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ವೈದ್ಯರಿಂದ ಮಾಹಿತಿ ಪಡೆದಾಗ ಮೂರು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಮಗುವೊಂದು ಮೃತಪಟ್ಟಿರುವುದು ಬೆಳಕಿಗೆ ಬಂತು. ಆ ಮಗುವಿನ ಕಳೇಬರವನ್ನು ಆಸ್ಪತ್ರೆಯ ಹಿಂದಿರುವ ಶವಾಗಾರದ ಪಕ್ಕದಲ್ಲಿ ಗುಂಡಿ ತೋಡಿ ದಫನ ಮಾಡಿರುವುದಾಗಿಯೂ ಮಾಹಿತಿ ತಿಳಿದು ಬಂತು. ಅಲ್ಲಿಗೆ ಎಸ್‍ಐ ತೆರಳಿ ಪರಿಶೀಲಿಸಿದಾಗ ಶವ ದಫನ ಮಾಡಿದ ಹೊಂಡ ತೆರೆದುಕೊಂಡಿರುವುದು ಮತ್ತು ಅದರಿಂದಲೇ ನಾಯಿ ಕಳೇಬರವನ್ನು ಕಚ್ಚಿಕೊಂಡು ಬಂದಿರುವುದು ಬೆಳಕಿಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News