×
Ad

ಮರಳು ಮಾಫಿಯಾಕ್ಕೆ ಶರತ್ ಬಲಿ?

Update: 2017-07-15 20:35 IST

ಬಂಟ್ವಾಳ, ಜು.15: ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಶರತ್ ಮಡಿವಾಳರ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ವಿಶೇಷ ತನಿಖಾ ತಂಡದ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ವಿಚಾರವನ್ನು ದೃಢಪಡಿಸಲು ಪೊಲೀಸರು ನಿರಾಕರಿಸಿದ್ದಾರೆ. 

ಜುಲೈ 4ರಂದು ರಾತ್ರಿ ಒಂದು ಬೈಕ್‍ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಸಜಿಪ ಮುನ್ನೂರು ಗ್ರಾಮದ ಕಂದೂರು ಮಡಿವಾಳ ಪಡ್ಪು ನಿವಾಸಿ, ಬಿ.ಸಿ.ರೋಡ್ ಉದಯ ಲಾಂಡ್ರಿ ಮಾಲಕನಾಗಿದ್ದ ಶರತ್ ಮಡಿವಾಳರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಗಂಭೀರ ಗಾಯಗೊಂಡಿದ್ದ ಶರತ್‍ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಜುಲೈ 7ರಂದು ರಾತ್ರಿ ಮೃತಪಟ್ಟಿದ್ದರು.

ಶರತ್ ಹತ್ಯೆ ಪ್ರಕರಣವನ್ನು ಭೇದಿಸಲು ಆರು ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಮೂರು ತಂಡ, ಬಂಟ್ವಾಳ ಪೊಲೀಸ್ ವೃತ್ತ ವ್ಯಾಪ್ತಿಯಲ್ಲಿ ಮೂರು ತಂಡ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿದೆ ಎನ್ನಲಾಗಿದೆ. ಬಿ.ಸಿ.ರೋಡ್ ಕೈಕಂಬ ಪರಿಸರದ ಇಬ್ಬರು, ಸಜಿಪ ಮುನ್ನೂರು ಗ್ರಾಮದ ಒಬ್ಬ ಸಹಿತ ಒಟ್ಟು ನಾಲ್ವರು ಪೊಲೀಸರ ವಶದಲ್ಲಿದ್ದು, ಬಂಧಿತರ ಹೆಸರು, ವಿಳಾಸ ತಿಳಿದು ಬಂದಿಲ್ಲ. 

ಮರಳು ಮಾಫಿಯಾಗೆ ಶರತ್ ಬಲಿ?: ಸಜಿಪ ಮುನ್ನೂರು ಸಹಿತ ನೆರೆಯ ಗ್ರಾಮದ ನೇತ್ರಾವತಿ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯ ವಿರುದ್ಧ ನಡೆದ ಹೋರಾಟದಲ್ಲಿ ಶರತ್ ಮುಂಚೂಣಿಯಲ್ಲಿದ್ದು ತಮಗೆ ಅಡ್ಡಿಯಾಗುತ್ತಿದ್ದ ಶರತ್‍ರನ್ನು ಮರಳು ಮಾಫಿಯಾದ ಕುಳಗಳೇ ಹತ್ಯೆ ನಡೆಸಿವೆ ಎಂದು ಹೇಳಲಾಗಿದೆ.

ಸುಮಾರು ವರ್ಷಗಳಿಂದ ಸಜೀಪ ಮುನ್ನೂರು ಗ್ರಾಮದ ನೇತ್ರಾವತಿ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ವಿರುದ್ಧ ಬಿಜೆಪಿಯ ಕೆಲವರು ಸೇರಿ ನಡೆಸುತ್ತಿದ್ದ ಹೋರಾಟದಲ್ಲಿ ಶರತ್ ಮುಂಚೂಣಿಯಲ್ಲಿದ್ದರು. ಒಂದು ವರ್ಷದ ಹಿಂದೆ ಸಜಿಪ ಮುನ್ನೂರು ಗ್ರಾಮದ ನಂದಾವರ ದೇವಸ್ಥಾನದ ಬಳಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ವಿರುದ್ಧ ನಡೆದ ಹೋರಾಟದಲ್ಲಿ ಶರತ್ ಮುಂಚೂಣಿಯಲ್ಲಿದ್ದು, ಹೋರಾಟದ ಫಲವಾಗಿ ಈ ಭಾಗದಲ್ಲಿ ನಡೆಯುತ್ತಿದ್ದ ಮರಳುಗಾರಿಗೆ ಸಂಪೂರ್ಣ ನಿಂತುಹೋಗಿದೆ. ಈ ದ್ವೇಷದಿಂದ ಬಂಟ್ವಾಳ ತಾಲೂಕಿನಲ್ಲಿ ನಡೆಯುತ್ತಿದ್ದ ಕೋಮು ಘರ್ಷಣೆಯ ಸಂದರ್ಭವನ್ನು ಉಪಯೋಗಿಸಿದ ದುಷ್ಕರ್ಮಿಗಳು ಶರತ್‍ನನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಒಂದು ಬಣ ವಿರೋಧ: ಸಜಿಪ ಮುನ್ನೂರು ಗ್ರಾಮದ ನೇತ್ರಾವತಿ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಬಿಜೆಪಿಯ ಒಂದು ಬಣ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದು ಬಣ ಇದರ ಪರವಿತ್ತು. ಮರಳುಗಾರಿಕೆಯಲ್ಲಿ ಇಲ್ಲಿನ ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ಇದ್ದುದ್ದರಿಂದ ಅವರ ಜೊತೆಗಿದ್ದ ಬಿಜೆಪಿಯ ಒಂದು ಬಣ ಹೋರಾಟದಿಂದ ದೂರ ಉಳಿಯುವಂತಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News