×
Ad

ಮಂಗಳೂರು ವಿವಿಯಲ್ಲಿ ಅಂತರಾಷ್ಟ್ರೀಯ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ

Update: 2017-07-15 21:01 IST

ಕೊಣಾಜೆ,ಜು.15:  ಮಂಗಳೂರು ವಿಶ್ವವಿದ್ಯಾಲಯದಲ್ಲಿ  ಅಂತರಾಷ್ಟ್ರೀಯ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭವು ವಿವಿಯ ಯಕ್ಷಗಾನ ಕಲಾಕೇಂದ್ರದಲ್ಲಿ ಶನಿವಾರ ನಡೆಯಿತು.
ಸಮಾರಂಭದಲ್ಲಿ ನೇಪಾಳ, ಅಫಘಾನಿಸ್ತಾನ, ಸಿರಿಯಾ, ಶ್ರೀಲಂಕಾ, ಈಜಿಪ್ಟ್, ತಝಕಿಸ್ತಾನ, ಹಂಗೇರಿ, ಬುರುಂಡಿ, ಇಂಡೋನೇಶಿಯಾ, ತಾಂಝಾನಿಯಾ ಹಾಗೂ ವಿಯೆಟ್ನಾಂನ ಒಟ್ಟು 33ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಾಗೂ ಪದವಿ ಪ್ರದಾನ ಮಾಡಿ ಮಾತನಾಡಿದ ಮಂಗಳೂರು ವಿವಿಯ ಕುಲಪತಿ ಫ್ರೊ.ಕೆ. ಭೈರಪ್ಪ ಅವರು, ರಾಷ್ಟ್ರಮಟ್ಟದಲ್ಲಿ ಶೈಕ್ಷಣಿಕ ಹಾಗೂ ಆಡಳಿತಾತ್ಮಕವಾಗಿ ವಿಶಿಷ್ಠ ಶ್ರೇಣಿಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯ ವಿವಿಧ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ವಿದೇಶಿ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದು ಕಳೆದ ಸಾಲಿನಲ್ಲಿ ವಿವಿಧ ದೇಶಗಳ 220ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದು ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಸುಮಾರು 500ರಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಮಂಗಳೂರು ವಿವಿಗೆ ಈಗಾಗಲೇ ಐಸಿಸಿಆರ್ 100ವಿದ್ಯಾರ್ಥಿಗಳನ್ನುಕೊಟ್ಟಿದ್ದು ನೇರವಾಗಿ 40ಆರ್ಜಿಗಳು ಬಂದಿದ್ದು 30ವಿದ್ಯಾರ್ಥಿಗಳು ಈಗಾಗಲೇ ಪ್ರವೇಶ ಪಡೆದಿದ್ದಾರೆ. ಕೆಲವು ವಿದ್ಯಾರ್ಥಿಗಳು ವೀಸಾಕ್ಕೆ ಕಾಯುತ್ತಿದ್ದಾರೆ. ಹಲವು ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳುಳ್ಳ ಖಾಸಗಿ ವಸತಿ ಸಂಕೀರ್ಣದಲ್ಲೂ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ವಿದೇಶಿ ವಿದ್ಯಾರ್ಥಿಗಳಿಗಾಗಿ ಮಂಗಳೂರು ವಿವಿಯ ಕ್ಯಾಂಪಸ್‍ನಲ್ಲಿ ಅತ್ಯಾಧುನಿಕ ಸೌಲಭ್ಯಗಳಿರುವ ಹಾಸ್ಟೆಲ್ ನಿರ್ಮಾಣವಾಗುತ್ತಿದ್ದು ಅದರಲ್ಲಿ ಸ್ಟುಡಿಯೋ ಅಪಾರ್ಟ್‍ಮೆಂಟ್ ಮಾದರಿಯಲ್ಲಿ ಅಡುಗೆ ಕೋಣೆ ಸೇರಿದಂತೆ ಸುಸಜ್ಜಿತ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಹೇಳಿದರು. 

ಕಾರ್ಯಕ್ರಮ ಉದ್ಘಾಟಿಸಿದ ಐಸಿಸಿಆರ್ ಬೆಂಗಳೂರಿನ ಪ್ರಾದೇಶಿಕ ನಿರ್ದೇಶಕ ವೇಣುಗೋಪಾಲ್ ಮಾತನಾಡಿ ಪದವಿ ಎಂಬುದು ನಮ್ಮ ಶೈಕ್ಷಣಿಕ ಜೀವನದ ಅಂತಿಮಘಟ್ಟವಲ್ಲ. ಯಾವುದೇ ಕ್ಷೇತ್ರದಲ್ಲಿ ಉದ್ದೇಶಿತ ಗುರಿಯೊಂದಿಗೆ ಸಾಧನೆಯೂ ಇದ್ದರೆ ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸಬಹುದು ಎಂದು ನುಡಿದರು.
ಮಂಗಳೂರು ವಿವಿ ಅಂತರಾಷ್ಟ್ರೀಯ ವಿದ್ಯಾರ್ಥಿ ಕೇಂದ್ರದ ನಿರ್ದೇಶಕ ಫ್ರೊ. ರವಿಶಂಕರ್ ರಾವ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ವಜೀದಾ ಬಾನು ಕಾರ್ಯಕ್ರಮ ನಿರೂಪಿಸಿದರು. ವಿವಿ ಪರೀಕ್ಷಾಂಗ ಕುಲಸಚಿವ ಡಾ. ಎ.ಎಂ. ಖಾನ್ ವಂದಿಸಿದರು. 

ಮಂಗಳೂರು ವಿವಿಯಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ವಿದೇಶಿ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಮಂಗಳೂರು ವಿವಿಯಲ್ಲಿ ಎಂಎಸ್ಸಿ ಎಲೆಕ್ಟ್ರಾನಿಕ್ಸ್‍ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ಬುರುಂಡಿಯ ಮುಗೀಷಾ ಎನ್ ಅವರು ತನ್ನ ಮೂರು ತಿಂಗಳ ಕಂದಮ್ಮನೊಂದಿಗೆ ಪದವಿ ಸ್ವೀಕರಿಸಿದ್ದು ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಬುರುಂಡಿಯ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದ ಅವರು ಉನ್ನತ ಶಿಕ್ಷಣಕ್ಕೆ ಮಂಗಳೂರು ವಿವಿಯನ್ನು ಆಯ್ಕೆ ಮಾಡಿಕೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News