×
Ad

ಯುವ ಜನತೆ ಹೆಚ್ಚು ರಕ್ತದಾನ ಮಾಡಿ: ಜಿಲ್ಲಾಧಿಕಾರಿ

Update: 2017-07-15 21:04 IST

ಮಣಿಪಾಲ, ಜು.15: ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ಕಾಲೇಜು ಜೀವನದಿಂದಲೇ ಸಾಮಾಜಿಕ ಚಟುವಟಿಕೆ ಗಳಲ್ಲಿ ತೊಡಗಿಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಶನಿವಾರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಉಡುಪಿ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ಕೇಂದ್ರ, ಕರಾವಳಿ ಸ್ವಯಂ ಪ್ರೇರಿತ ರಕ್ತದಾನಿಗಳ ಸಂಘ ಗಂಗೊಳ್ಳಿ, ಲಯನ್ಸ್ ಕ್ಲಬ್ ಉಡುಪಿ ಮಿಡ್‌ಟೌನ್, ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು, ಯುವ ರೆಡ್‌ಕ್ರಾಸ್ ಘಟಕ, ಸರಕಾರಿ ಪಾಲಿಟೆಕ್ನಿಕ್ ಉಡುಪಿ, ಸ್ನೇಹ ಟ್ಯುಟೋರಿಯಲ್ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ವಿಶ್ವ ರಕ್ತದಾನಿಗಳ ದಿನ’ದ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಒಬ್ಬ ರಕ್ತದಾನಿಯಿಂದ ಮೂವರ ಜೀವ ಉಳಿಸಲು ಸಾಧ್ಯವಿದೆ. ನಿರಂತರವಾಗಿ ರಕ್ತದಾನ ಮಾಡುವುದರಿಂದ ಒಬ್ಬ ವ್ಯಕ್ತಿ ಜೀವಿತಾವಧಿಯಲ್ಲಿ ಹಲವು ಮಂದಿಯ ಜೀವ ಉಳಿಸಲು ಸಾಧ್ಯವಿದೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ತೊಡಗಿಕೊಳ್ಳಬಹುದಾದ ಸಾಮಾಜಿಕ ಕಾರ್ಯ ರಕ್ತದಾನ. ರಕ್ತದಾನದ ಕುರಿತು ಹಲವು ತಪ್ಪು ಕಲ್ಪನೆ ಗಳಿದ್ದು, ವಿದ್ಯಾರ್ಥಿಗಳು ರಕ್ತದಾನದ ಮಹತ್ವವನ್ನು ಅರಿತು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ವಿದ್ಯಾರ್ಥಿಗಳು ಸ್ವಚ್ಚತಾ ಅಭಿಯಾನದ ಅಂಗವಾಗಿ ತಮ್ಮ ಕಾಲೇಜು ಮತ್ತು ಮನೆಯ ಪರಿಸರದಲ್ಲಿ ತ್ಯಾಜ್ಯ ಬಿಸಾಡದಂತೆ ಹಾಗೂ ಸಮರ್ಪಕ ರೀತಿಯಲ್ಲಿ ಕಸ ವಿಲೇವಾರಿ ಮಾಡುವಂತಹ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದವರು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದವರನ್ನು ಸನ್ಮಾನಿಸಲಾಯಿತು. ಉಡುಪಿ ಜಿಲ್ಲಾ ಖಜಾನಾಧಿಕಾರಿ ಮಾವಹೆಗ್ಡೆಸೇರಿದಂತೆವಿವಿ ಇಲಾಖೆಯ ಸರಕಾರಿ ನೌಕರರು ಮತ್ತು ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.

ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹಣ್ಯ ಶೇರೆಗಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ. ಮಧುಸೂದನ್ ನಾಯಕ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಗದೀಶ ರಾವ್, ಸರಕಾರಿ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಸಿ. ಪಿ.ಗಣಪತಿ, ಕರಾವಳಿ ಸ್ವಯಂಪ್ರೇರಿತ ರಕ್ತದಾನಿಗಳ ಸಂಘದ ಅಧ್ಯಕ್ಷ ದಿವಾಕರ ಖಾರ್ವಿ, ಲಯನ್ಸ್ ಕ್ಲಬ್ ಉಡುಪಿ ಮಿಡ್‌ಟೌನ್ ಅಧ್ಯಕ್ಷ ನಾರಾಯಣ ಕುಡ್ವ, ಸ್ನೇಹ ಟ್ಯಟೋರಿಯಲ್‌ನ ಪ್ರಾಂಶುಪಾಲ ಉಮೇಶ್ ನಾಯಕ್, ಸರಕಾರಿ ನೌಕರರ ಸಂಘದ ರಾಜ್ಯಪರಿಷತ್ ಸದಸ್ಯ ಕಿರಣ್ ಹೆಗ್ಡೆ, ಜಿಲ್ಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಅರುಣ ವಾ.ಲೋಕರೆ, ಖಜಾಂಚಿ ಬಿ.ಚಂದ್ರಶೇಖರ್ ಉಪಸ್ಥಿತರಿದ್ದರು.

ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹಣ್ಯ ಶೇರೆಗಾರ್ ಸ್ವಾಗತಿಸಿದರು. ಪ್ರಶಾಂತ್ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News