ಭಟ್ಕಳದ ಘನಿ ಸಾಹೇಬ್‌ರ ಆದರ್ಶ ಮಾದರಿಯಾಗಲಿ:ಮೌಲಾನ ಇಲ್ಯಾಸ್ ನದ್ವಿ
ಮಂಗಳೂರು, ಜು.15: ಸಮುದಾಯದ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿದ್ದ ಭಟ್ಕಳದ ಹಿರಿಯ ನಾಯಕ ದಿವಂಗತ ಮೊಹ್ತಿಶಾಮ್ ಅಬ್ದುಲ್ ಘನಿ ಸಾಹೇಬ್ ಅವರ ಬದುಕು ಮತ್ತು ಆದರ್ಶ ಎಲ್ಲರಿಗೂ ಮಾದರಿಯಾಗಬೇಕು
ಎಂದು ಮೌಲಾನಾ ಅಲಿ ಮಿಯಾ ನದ್ವಿ ಇಸ್ಲಾಮಿಕ್ ಅಕಾಡಮಿಯ ಪ್ರಧಾನ ಕಾರ್ಯದರ್ಶಿ ಮೌಲಾನ ಇಲ್ಯಾಸ್ ನದ್ವಿ ಜಾಕ್ವಿ ಹೇಳಿದ್ದಾರೆ.
ಭಟ್ಕಳಿ ಜಮಾಅತುಲ್ ಮುಸ್ಲಿಮೀನ್ (ಬಿಜೆಎಂ) ಮಂಗಳೂರು ವತಿಯಿಂದ ಶನಿವಾರ ನಗರದ
ಪ್ರೆಸ್ಟೀಜ್ ಸ್ಕೂಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ‘ಈದ್ ಮಿಲನ್-2017’ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಸಮುದಾಯಕ್ಕೆ ಘನಿ ಸಾಹೇಬ್ ಅವರ ಕೊಡುಗೆ ಅಪಾರವಾಗಿದೆ. ಧಾರ್ಮಿಕ, ಶೈಕ್ಷಣಿಕ ಸಹಿತ ವಿವಿಧ ಕ್ಷೇತ್ರಗಳಲ್ಲಿ
ಅವರು ಸಲ್ಲಿಸಿದ್ದ ನಿಸ್ವಾರ್ಥ ಸೇವೆಯು ಸಮುದಾಯದಲ್ಲಿನ ಪ್ರತಿಯೊಬ್ಬರಿಗೂ ಮಾದರಿಯಾಗಬೇಕು. ಯಾವುದೇ ಫಲಾಪೇಕ್ಷೆಗಳನ್ನು
ಬಯಸದ ಅವರ ಸಮಾಜ ಸೇವೆಯನ್ನು ಭಟ್ಕಳದ ಜನರು ಇಂದಿಗೂ ಸ್ಮರಿಸುತ್ತಾರೆ.
ಘನಿಸಾಹೇಬ್‌ರಂತಹ ಆದರ್ಶ ನಾಯಕರನ್ನು ಮುಂದಿನ ಪೀಳಿಗೆ ನೆನಪಿಟ್ಟುಕೊಳ್ಳುವಂತಹ ಯೋಜನೆ ರೂಪಿಸಬೇಕಿದೆ ಎಂದರು.
ಧಾರ್ಮಿಕ ಚೌಕಟ್ಟಿನೊಳಗೆ ಬದುಕು ಸಾಗಿಸುತ್ತಿದ್ದ ಅವರು, ಈ ವಿಷಯದಲ್ಲಿ ಯಾರೊಂದಿಗೂ ಹೊಂದಾಣಿಕೆ
ಮಾಡಿಕೊಳ್ಳುತ್ತಿರಲಿಲ್ಲ. ಧಾರ್ಮಿಕ ಶಿಕ್ಷಣದ ಜೊತೆಗೆ ಲೌಕಿಕ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡಿದ್ದರು. ಶಾಂತಿ ಮತ್ತು
ಸಹಬಾಳ್ವೆಗೆ ಒತ್ತು ನೀಡುತ್ತಿದ್ದ ಅವರು, ಸಮುದಾಯದಲ್ಲಿನ ಸಮಸ್ಯೆಗಳಿಗೆ ಸಂಬಂಧಿಸಿ ಎಲ್ಲರನ್ನೂ ವಿಶ್ವಾಸಕ್ಕೆ
ತೆಗೆದುಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳುತ್ತಿದ್ದರು. ಅವರೊಂದಿಗೆ ಮಾತನಾಡಲು ಕುಳಿತುಕೊಂಡರೆ ಅವರ
ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಸೇವೆಯ ಮನೋಭಾವವನ್ನು ಸುಲಭದಲ್ಲಿ ತಿಳಿಯಬಹುದಾಗಿತ್ತು ಎಂದು
ಘನಿಸಾಹೇಬ್‌ರ ಒಡನಾಟವನ್ನು ಸ್ಮರಿಸುತ್ತಾ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜೆಎಂನ ಅಧ್ಯಕ್ಷ ಎಸ್.ಎಂ.ಅರ್ಶದ್ ಮಾತನಾಡಿ, ಕಳೆದ ಹಲವು ವರ್ಷಗಳಿಂದ
ಬಿಜೆಎಂ ವಿವಿಧ ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಈ ಬಾರಿ ಘನಿ ಸಾಹೇಬರ ಸ್ಮರಣಾರ್ಥ
ಶೈಕ್ಷಣಿಕ ಪುರಸ್ಕಾರ ನೀಡುವ ಯೋಜನೆ ಪ್ರಾರಂಭಿಸಲಾಗಿದೆ ಎಂದರು.
ಮಜ್ಲಿಸೆ ಇಸ್ತಾಹ್ ವ ತಂಝೀಮ್‌ನ ಅಧ್ಯಕ್ಷ ಮುಝಮ್ಮಿಲ್ ಖಾಝಿಯಾ, ಬಿಜೆಎಂನ ಪ್ರಧಾನ ಕಾರ್ಯದರ್ಶಿ
ಇಮ್ತಿಯಾಝ್ ದಾಮ್ದ, ಉಪಾಧ್ಯಕ್ಷ ಅನ್ಸಾರ್ ಮುಸ್ಬಾ, ಬಿಜೆಎಂನ ಮಾಜಿ ಅಧ್ಯಕ್ಷ ಅಬ್ದುರ್ರಹ್ಮಾನ್ ಮೊಹ್ತಿಶಾಮ್,
ಭಟ್ಕಳದ ಅಂಜುಮನ್ ಹಾಮಿಯೆ ಮುಸ್ಲಿಮೀನ್‌ನ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಸಿದ್ದೀಖಿ, ಶಾಸಕಮೊಯ್ದಿನ್ ಬಾವ ಉಪಸ್ಥಿತರಿದ್ದರು.
‘ಈದ್ ಮಿಲನ್ 2017’ ಇದರ ಸಂಚಾಲಕ ಆಫ್ತಾಬ್ ಹುಸೈನ್ ಕೋಲ ಸ್ವಾಗತಿಸಿದರು. ಅಬ್ದುರ್ರಹ್ಮಾನ್ ಕಿರಾಅತ್
ಪಠಿಸಿದರು. ಮುಹಮ್ಮದ್ ಇಬ್ರಾಹೀಂ ಅನುವಾದಿಸಿದರು.
ಬಿಜೆಎಂ ಕಾರ್ಯದರ್ಶಿ ತಲ್ಹಾ ಅಕ್ರಮಿ ವಂದಿಸಿದರು. ಸಾಹಿಲ್ ಕಾರ್ಯಕ್ರಮ ನಿರೂಪಿಸಿದರು.
ನಗರದಲ್ಲಿ ಸೇವೆ ಸಲ್ಲಿಸುತ್ತಿರುವ ಭಟ್ಕಳ ಮೂಲದ ವೈದ್ಯರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.