ಕರಾವಳಿ ಕರ್ನಾಟಕ ಡ್ಯಾನ್ಸ್ ಯೂನಿಯನ್ ಉದ್ಘಾಟನೆ
ಮಂಗಳೂರು, ಜು.16: ಕರಾವಳಿಯಲ್ಲಿ ವಿವಿಧ ಪ್ರಕಾರದ ನೃತ್ಯ ಕಾರ್ಯಕ್ರಮಗಳನ್ನು ನೀಡುತ್ತಿರುವ ವಿವಿಧ ನೃತ್ಯ ತಂಡಗಳನ್ನು ಒಂದೇ ವೇದಿಕೆಯಡಿ ತರುವ ಉದ್ದೇಶದಿಂದ ಸ್ಥಾಪಿಸಲಾದ ‘ಕರಾವಳಿ ಕರ್ನಾಟಕ ಡ್ಯಾನ್ಸ್ ಯೂನಿಯನ್’ನ ಉದ್ಘಾಟನೆ ಇಂದು ನಗರದ ಪುರಭವನದಲ್ಲಿ ನಡೆಯಿತು.
ಕರ್ನಾಟಕ ರಕ್ಷಣಾ ವೇದಿಕೆ ದ.ಕ. ಜಿಲ್ಲಾ ಅಧ್ಯಕ್ಷ ಅನಿಲ್‌ದಾಸ್ ಕಾರ್ಯಕ್ರಮ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹರೇಕಳ ವಹಿಸಿದ್ದರು. ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, ಮಾಜಿ ಉಪಮೇಯರ್ ಬಶೀರ್ ಬೈಕಂಪಾಡಿ, ಲಯನ್ಸ್ ಕ್ಲಬ್‌ನ ನಾಗೇಶ್ ಕುಮಾರ್, ಪ್ರಮುಖರಾದ ವಿನೋದ್ ಸಿಕ್ವೇರಾ, ಕರಾವಳಿ ಕರ್ನಾಟಕ ಡ್ಯಾನ್ಸ್ ಯೂನಿಯನ್’ ಪದಾಧಿಕಾರಿಗಳಾದ ಸೂರಜ್ ಶೆಟ್ಟಿ ಬಜಪೆ, ಪ್ರಕಾಶ್ ಸಿಂಪೋನಿ, ಲಕ್ಷ್ಮೀಶ ಶೆಟ್ಟಿ, ಪ್ರವೀಣ್ ಕೆ, ಪ್ರಮೋದ್ ಆಳ್ವ, ಅವಿಲ್ ಮುಂತಾದವರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಸೇರಿದಂತೆ ಸುಮಾರು 150ಕ್ಕೂ ಅಧಿಕ ನೃತ್ಯ ನಿರ್ದೇಶಕರು ಮತ್ತು ಸುಮಾರು 4575ರಷ್ಟು ನೃತ್ಯಪಟುಗಳು ಈ ಸಂಘದಲ್ಲಿ ಹೆಸರು ನೋಂದಾಯಿಸಿದ್ದಾರೆ. ಸಂಘದ ಎಲ್ಲಾ ನೃತ್ಯ ನಿರ್ದೆಶಕರಿಗೂ ಗುರುತಿನ ಚೀಟಿ ನೀಡುವುದು, ವಿಮಾ ಯೋಜನೆಯಲ್ಲಿ ಎಲ್ಲಾ ಸದಸ್ಯರನ್ನು ಸೇರ್ಪಡೆಗೊಳಿಸುವುದು ಹಾಗೂ ಹಿರಿಯ ನೃತ್ಯ ನಿರ್ದೇಶಕರು ಅಥವಾ ನೃತ್ಯ ಪಟುಗಳಿಗೆ ಸರಕಾರಿ ವತಿಯಿಂದ ಸೌಲಭ್ಯಕ್ಕೆ ಪ್ರಯತ್ನ ನಡೆಸಲಾಗುವುದು ಎಂದು ‘ಕರಾವಳಿ ಕರ್ನಾಟಕ ಡ್ಯಾನ್ಸ್ ಯೂನಿಯನ್’ನ ಅಧ್ಯಕ್ಷ ರಾಜೇಶ್ ಕಣ್ಣೂರು ಹೇಳಿದರು.
ಅಧ್ಯಕ್ಷ ರಾಜೇಶ್ ಕಣ್ಣೂರು ಸ್ವಾಗತಿಸಿದರು.