ಪುತ್ತೂರು ಶಿಕ್ಷಣಾಧಿಕಾರಿ ವರ್ಗಾವಣೆ
ಪುತ್ತೂರು, ಜು.16: ಎಸ್‌ಎಸ್‌ಎಲ್ ಸಿ ಫಲಿತಾಂಶವನ್ನು ಹೆಚ್ಚುವರಿ ಮಾಡುವ ನಿಟ್ಟಿನಲ್ಲಿ ಮಿಷನ್95+ ಯೋಜನೆಯನ್ನು ರೂಪಿಸಿ ಯಶಸ್ವಿಯಾಗಿದ್ದು, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಜಿ.ಎಸ್.ಶಶಿಧರ್ ಅವರು ಶಿವಮೊಗ್ಗ ಡಯೆಟ್ ಉಪನ್ಯಾಸಕರಾಗಿ ವರ್ಗಾವಣೆಗೊಂಡಿದ್ದಾರೆ.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಚಿಕ್ಕಬಳ್ಳಾಪುರ ಡಯೆಟ್ ನಲ್ಲಿ ಹಿರಿಯ ಉಪನ್ಯಾಸಕರಾಗಿದ್ದ ಸುಕನ್ಯಾ ಅವರನ್ನು ನೇಮಕ ಮಾಡಲಾಗಿದೆ. ಮಿಷನ್ 96+ ಯೋಜನೆಗೆ ರಾಷ್ಟ್ರ ಪ್ರಶಸ್ತಿ ಗಳಿಸಿಕೊಂಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್ ಶಶಿಧರ್ ಪುತ್ತೂರಿನಲ್ಲಿ ಹಲವಾರು ಹೊಸ ಯೋಜನೆಗಳ ಪ್ರಯೋಗಕ್ಕೆ ಮುಂದಾಗಿದ್ದರು. ’ಗುಬ್ಬಚ್ಚಿ ಗೂಡು’ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸು, ವಿಷನ್ ಪುತ್ತೂರು, ಸ್ವಾದಿಷ್ಠ ಮೊದಲಾದ ಯೋಜನೆಗಳನ್ನು ಪ್ರಾರಂಭಿಸಿದ್ದರು. ಮಿಷನ್ 95+ ಯೋಜನೆಯಡಿಯಲ್ಲಿ 10 ನೇ ತರಗತಿಯ ಫಲಿತಾಂಶವನ್ನು ಹೆಚ್ಚಿಸುವ ಪ್ರಯೋಗಕ್ಕೆ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದ ಶಶಿಧರ್ ಅವರು ತನ್ನ ನೇರ ನಡೆ ನುಡಿಗಾಗಿ ಹಲವಾರು ಮಂದಿಯ ವಿರೋಧಕ್ಕೂ ಒಳಗಾಗಿದ್ದರು.
ಇವರ ಮೇಲೆ ಲೋಕಾಯುಕ್ತರಿಗೂ ದೂರು ನೀಡಲಾಗಿತ್ತು. ಸೋಮವಾರ ಅವರು ಶಿವಮೊಗ್ಗ ಡಯೆಟ್ ನಲ್ಲಿ ಉಪನ್ಯಾಸಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.