ಕಲ್ಲೇಗ ಮಸೀದಿಯಲ್ಲೊಂದು ವಿಶೇಷ ಕಾರ್ಯಕ್ರಮ: ಜಮಾಅತ್ ವ್ಯಾಪ್ತಿಯ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ
ಪುತ್ತೂರು, ಜು,.16: ಪುತ್ತೂರಿನ ಕಲ್ಲೇಗ ಜಮಾಅತ್ ವ್ಯಾಪ್ತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 22 ಪ್ರತಿಭಾನ್ವಿತರಿಗೆ ಅಭಿನಂದನಾ ಕಾರ್ಯಕ್ರಮ ಕಲ್ಲೇಗ ಮಸೀದಿಯಲ್ಲಿ ನಡೆಯಿತು.
ಶಿಕ್ಷಣ, ವೈದ್ಯಕೀಯ, ಪತ್ರಿಕೋದ್ಯಮ, ಕಾನೂನು, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನ ರಫೀಕ್ ಮಾಸ್ಟರ್ ಮಾತನಾಡಿ, ಮಸೀದಿಯು ಸಮುದಾಯದ ಕಲ್ಯಾಣಕೇಂದ್ರವಾಗುವ ಕಾರ್ಯಕ್ಕೆ ಚಾಲನೆ ನೀಡಿದ ಕಲ್ಲೇಗ ಜಮಾಅತ್ ಕಮಿಟಿಯ ಕಾರ್ಯ ಪ್ರಶಂಸಾರ್ಹ. ಒಂದು ಜಮಾಅತ್ ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿ ತನ್ನ ವ್ಯಾಪ್ತಿಯ ಮುಸ್ಲಿಮರ ಸಬಲೀಕರಣಕ್ಕೆ ಈ ರೀತಿಯಲ್ಲಿ ಕಾರ್ಯಾಚರಣೆಗೆ ಇಳಿದರೆ ರಾಜ್ಯದ ಪ್ರಗತಿಪರ ಸಮುದಾಯವಾಗಿ ನಾವು ರೂಪುಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದರು.
ಜಮಾಅತ್ ವ್ಯಾಪ್ತಿಯ ವೃತ್ತಿಪರರು ಮತ್ತು ಯುವಕರು ಮಸೀದಿಯ ಕಾರ್ಯಚಟುವಟಿಕೆಯ ಭಾಗವಾಗಬೇಕು. ಜಮಾಅತ್ ನ ಯುವಸಮುದಾಯವನ್ನು ಎಲ್ಲಾ ಕ್ಷೇತ್ರಗಳಲ್ಲೂ ಮೇಲೆತ್ತಲು ಸಂಘಟಿತ ಪ್ರಯತ್ನದಲ್ಲಿ ನಾವು ಭಾಗಿಯಾಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿಭಾನ್ವಿತರನ್ನು ಗುರುತಿಸಿ ಅವರಲ್ಲಿ ಮಸೀದಿಯೊಂದಿಗಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಪ್ರಯತ್ನವನ್ನು ಈ ಮೂಲಕ ನಾವು ಮಾಡುತ್ತಿದ್ದೇವೆ ಎಂದು ಜಮಾಅತ್ ಕಮಿಟಿಯ ಅಧ್ಯಕ್ಷ ಶುಕೂರ್ ಹಾಜಿ ಹೇಳಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ದಿಲ್ಶಾದ್ (ಎಂ.ಬಿ.ಬಿ.ಎಸ್. ಎಂ.ಡಿ.), ಡಾ.ಸಂಶಾದ್ (ಎಂ.ಡಿ.ಎಸ್. ಬಿ.ಡಿ.ಎಸ್.), ಡಾ.ಆಯಿಶಾ ನಿಶಾ(ಎಂ.ಬಿ.ಬಿ.ಎಸ್. ಎಂ.ಡಿ.) ಡಾ.ಫರ್ವೀನ್(ಬಿ.ಡಿ.ಎಸ್. ಎಂಡಿಎಸ್) ಡಾ.ಅಬ್ದುಲ್ ರಝಾಕ್ (ಎಂ.ಬಿ.ಬಿ.ಎಸ್. ಎಂ.ಡಿ.ಎಸ್.) ಡಾ.ಅಝೀಝ್ ಮುಸ್ತಫಾ (BETECH.PHD) ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಅನೀಸ್ ಕಲ್ಲೇಗ (ಎಂ.ಕಾಂ.) ಯಾಸ್ಮೀನ್ ಪಡ್ಡಯ್ಯೂರು (MA BED) ಶಾಹೀನಾ ಪಡ್ಡಯ್ಯೂರು (ಎಂ.ಕಾಂ.) ಇವರನ್ನೂ ಅಭಿನಂದಿಸಲಾಯಿತು.
ಕಾನೂನು ಕ್ಷೇತ್ರದಲ್ಲಿ ಪುತ್ತೂರಿನಲ್ಲಿ ಪ್ರಮುಖ ಮೂವರು ಹಿರಿಯ ವಕೀಲರು ಕಲ್ಲೇಗ ಜಮಾತ್ ಗೆ ಒಳಪಟ್ಟವರಾಗಿದ್ದರೂ ಅವರ ಗೌರವ ಇರುವಿಕೆಯಲ್ಲಿ ಶಾಕಿರಾ ಭಾನು ಅವರನ್ನು ಅಭಿನಂದಿಸಲಾಯಿತು. ಪತ್ರಿಕೋದ್ಯಮದಲ್ಲಿ ಹನೀಫ್ ಪುತ್ತೂರ್, ಶರೀಫ್ ಅಶ್ರಫೀ, ಅಬ್ಬಾಸ್ ಸಾಲಿತ್ ಅವರನ್ನೂ ಸನ್ಮಾನಿಸಲಾಯಿತು. ಇದೇ ಸಂದರ್ಭ ಪ್ರತಿಭಾನ್ವಿತ ವಿಧ್ಯಾರ್ಥಿಗಳನ್ನೂ ಅಭಿನಂದಿಸಲಾಯಿತು.
ಎಸೆಸೆಲ್ಸಿಯಲ್ಲಿ 94 ಶೇ. ಅಂಕ ಪಡೆದು ತೇರ್ಗಡೆಯಾದ ಮಿಫ್ತಾ, ಫಾತಿಮತ್ ಅಫ್ರಾ ಹಾಗೂ ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದಾ ಶಿಫಾನಾ, ಜಮ್ಸೀ, ಎಂ.ಕಾಂ. ನಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದ ಮುನೀರಾ ಶಹನಾಝ್, ಹಾಫಿಝಾ ಮೈಮೂನಾ ಮಿರ್ಫಾ, ಮದ್ರಸ ಪರೀಕ್ಷೆಯ ಸಾಧಕಿಯರಾದ ಶಝ್ಮಾ ಆಯಿಷಾ, ಮುನಾಝಾ ರನ್ನೂ ಅಭಿನಂದಿಸಲಾಯಿತು.
ಜಮಾಅತ್ ಕಮೀಟಿ ಅಧ್ಯಕ್ಷ ಶುಕೂರ್ ಹಾಜಿಯವರ ನೇತೃತ್ವದಲ್ಲಿ ಜಮಾಅತ್ ಖತೀಬರ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರು ಹಾಗೂ ಅಲ್-ಅಮೀನ್ ಯಂಗ್ ಮೆನ್ಸ್ ಅಸೋಸಿಯೇಶನ್ ಕಲ್ಲೇಗ ಇದರ ಸದಸ್ಯರು ಈ ಕಾರ್ಯಕ್ರಮವನ್ನು ಸಂಘಟಿಸಿದ್ದರು.